ಹುಬ್ಬಳ್ಳಿ :ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೆ ಐದು ಗ್ಯಾರಂಟಿ ಘೋಷಣೆ ಮಾಡಿತ್ತು. ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ದಿನನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಗ್ಯಾರಂಟಿಯಿಂದ ಉಚಿತ ಕೊಡ್ತೇವೆ ಅಂತ ದರ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಹೊರೆ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ನಗರದಲ್ಲಿಂದು ಮಾತನಾಡಿದ ಅವರು, ಇನ್ನು ಅನೇಕ ಕಡೆ ಬೆಳೆಗಳು ಸರಿಯಾಗಿ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬೆಲೆ ನಿಯಂತ್ರಣಕ್ಕೆ ಮುಂದಾಯಿತು. ಸರಿಯಾದ ರೀತಿಯಲ್ಲಿ ಪೂರೈಕೆ ಇರದ ಕಾರಣ ಆಹಾರ ಧಾನ್ಯ ಸಿಗಲಿಲ್ಲ. ಈಗಲೂ ಸಿಗುತ್ತಾ ಇಲ್ಲ. ನೈಸರ್ಗಿಕವಾಗಿ ಅದು ಆಗಿದ್ದು. ಇನ್ನು ಮಾನವ ನಿರ್ಮಿತವಾದ ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಮಾಡ್ತಾ ಇದ್ದಾರೆ. ಹಾಗಾದರೆ ಏನು ಗ್ಯಾರಂಟಿ ಕೊಟ್ಟಿರಿ. ಈಗ ಪೆಟ್ರೋಲ್ ಮೂರುವರೆ ರೂಪಾಯಿ ಜಾಸ್ತಿ ಮಾಡಿದಿರಿ, ಇದರಿಂದ ಬಸ್ ದರ, ಹಾಲಿನ ದರ, ಅಕ್ಕಿ, ಎಲ್ಲವೂ ಹೆಚ್ಚಾಗುತ್ತದೆ. ಸರ್ಕಾರದ ಬಡವರ ವಿರೋಧ ನೀತಿಯನ್ನು ವಿರೋಧಿಸುತ್ತೇನೆ. ಗ್ಯಾರಂಟಿ ಗ್ಯಾರಂಟಿ ಎಂದರು. ಜನರು ಈಗ ತಿರಸ್ಕಾರ ಮಾಡಿದ್ದಾರೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ದ್ವೇಷ ಸಾಧಿಸಿದ್ದರಿಂದಲೇ ಈ ರೀತಿ ಬೆಲೆ ಏರಿಕೆ ಮಾಡಿದ್ದಾರೆ.
ಜನಸಾಮಾನ್ಯರ ಮೇಲೆ ಹಗೆ ತೀರಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಿದ್ದಾರೆ. ರಾಜ್ಯ ಸರ್ಕಾರ ಹಿಂದೆ ಬೆಲೆ ಏರಿಕೆ ವಿರುದ್ಧ ಶವ ಯಾತ್ರೆ ಮಾಡಿದ್ದರು. ನಾವು ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಚೆಂಬನ್ನು ರಾಜ್ಯದ ಜನತೆಗೆ ಕೊಟ್ಟಿದೆ: ಮತ್ತೊಂದೆಡೆ ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ, ಜನರ ಜೇಬಿಗೆ ಕತ್ತರಿ ಹಾಕುವ ಮೂಲಕ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಚೊಂಬನ್ನು ರಾಜ್ಯದ ಜನತೆಗೆ ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಬೆಲೆ ಹೆಚ್ಚಿಗೆ ಮಾಡಿದ್ದು, ಈ ಸರ್ಕಾರ ಯಾರ ಪರವಾಗಿ ಕೆಲಸ ಮಾಡುತ್ತಿದೆ. ಪೆಟ್ರೋಲ್ ಬೆಲೆ ಏರಿಕೆ ಜನರ ದಿನನಿತ್ಯದ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದ್ರೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿದೆ. ಇನ್ನೂ ಕೆಲ ರಾಜ್ಯಗಳಲ್ಲಿ ಹೆಚ್ಚಿಗೆ ಇದೆ. ಹೆಚ್ಚಿಗೆ ಇರುವ ರಾಜ್ಯಗಳ ಉದಾಹರಣೆಯನ್ನು ಈ ಸರ್ಕಾರ ಕೊಡುತ್ತಿದೆ. ಅಲ್ಲದೆ ಸ್ಟಾಂಪ್ ಡ್ಯೂಟಿ ಹಣವನ್ನು ಈ ಸರ್ಕಾರ ಹೆಚ್ಚಳ ಮಾಡಿದೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಮೂಲಕ ಜನರಿಗೆ ಅಕ್ಷಯ ಪಾತ್ರೆ ನೀಡುತ್ತೇವೆಂದು ಬೆಲೆ ಏರಿಕೆ ಮೂಲಕ ರಾಜ್ಯದ ಜನತೆಗೆ ಚೆಂಬು ಕೊಟ್ಟಿದ್ದಾರೆ ಎಂದು ಕಿಡಿಕಾರಿದ ಅವರು, ಪೆಟ್ರೋಲ್ ಮೇಲೆ ಹಾಕಿದ ಟ್ಯಾಕ್ಸ್ ನ್ನು ವಾಪಸ್ ಪಡೆಯಬೇಕು. ನಾಳೆ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.