ಬೆಂಗಳೂರು: ಬಂಡೀಪುರ-ವಯನಾಡ್ ನಡುವೆ ಸಂಚಾರಕ್ಕೆ ಯಾವುದೇ ತೊಡಕಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಬಂಡೀಪುರ ಮತ್ತು ವಯನಾಡ್ ರಸ್ತೆಗಳ ನಡುವೆ ರಾತ್ರಿ ಸಂಚಾರದ ಕುರಿತ ಪ್ರಶ್ನೆಗೆ ಉತ್ತರಿಸಿ, "ಪ್ರಸ್ತುತ ರಾತ್ರಿ 9ರವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರ ಹೊರತಾಗಿಯೂ ಎರಡೂ ಕಡೆಯಿಂದ 2 ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ ವಾಹನಗಳನ್ನು ಪರಿಶೀಲಿಸಿ ಬಿಡಲಾಗುತ್ತಿದೆ" ಎಂದರು.
"ಅರಣ್ಯದೊಳಗೆ ಅಳವಡಿಸಲಾಗಿರುವ ವಿದ್ಯುತ್ ತಂತಿಗಳು ಕೆಲವೆಡೆ ಜೋತು ಬಿದ್ದಿದ್ದು, ಆನೆಗಳು ಸಾವಿಗೀಡಾಗುತ್ತಿವೆ. ವಿದ್ಯುತ್ ತಂತಿ ತೂಗಾಡದಂತೆ ಕ್ರಮ ವಹಿಸಲು ಮತ್ತು ಅಂತರ್ಗತ ಕೇಬಲ್ ಅಳವಡಿಸಿಲು ವಿದ್ಯುತ್ ಕಂಪನಿಗಳಿಗೆ ತಿಳಿಸಲಾಗಿದೆ" ಎಂದು ಹೇಳಿದರು.
"ಆನೆಗಳಿಂದ ಬೆಳೆಹಾನಿ ಮತ್ತು ಜೀವಹಾನಿ ಆಗುತ್ತಿದ್ದು, ಇದನ್ನು ತಪ್ಪಿಸಲು ಭದ್ರಾ ಅಭಯಾರಣ್ಯದಲ್ಲಿ ಆನೆಗಳ ವಿಹಾರಧಾಮ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ನಿರ್ಮಿಸಲು ಯೋಜನೆ ರೂಪಿಸಲಾಗತ್ತಿದೆ. ಇದಕ್ಕೆ 100 ಕೋಟಿ ರೂ. ಅಗತ್ಯವಿದ್ದು, ಬಜೆಟ್ನಲ್ಲಿ ಅನುದಾನ ನೀಡುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು" ಎಂದು ತಿಳಿಸಿದರು.
ಅರಣ್ಯವಾಸಿಗಳ ಸ್ಥಳಾಂತರ: "ರಾಜ್ಯದ ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಅಭಯಾರಣ್ಯ, ಮೀಸಲು ಅರಣ್ಯ, ಹುಲಿ ಸಂರಕ್ಷಿತ ಅರಣ್ಯ ಸೇರಿದಂತೆ ವಿವಿಧ ಅರಣ್ಯಗಳಲ್ಲಿ ಹಲವಾರು ವರ್ಷಗಳಿಂದ ಅರಣ್ಯವಾಸಿಗಳು ಜೀವಿಸುತ್ತಿದ್ದು, ಗಂಡ, ಹೆಂಡತಿ ಒಳಗೊಂಡು ಪ್ರತೀ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಿ ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು" ಎಂಬ ಭರವಸೆ ನೀಡಿದರು.
"ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕ್ಯಾಂಪಾ) ರಾಜ್ಯಗಳಿಂದ ಸಂಗ್ರಹವಾದ ಹಣವನ್ನು ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದು, ದಕ್ಷಿಣ ರಾಜ್ಯಗಳ ಅರಣ್ಯ ಸಚಿವರ ನಿಯೋಗವನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುತ್ತೇವೆ" ಎಂದು ತಿಳಿಸಿದರು.
"ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿದ್ದು, ಅವು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗುತ್ತಿವೆ, ಮಾನವ -ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಸಲು, ಕಾರಿಡಾರ್ ನಿರ್ಮಿಸಲು ಕ್ಯಾಂಪಾದಲ್ಲಿರುವ ರಾಜ್ಯದ 1,400 ಕೋಟಿ ರೂ. ಹಣವನ್ನೇ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರ ಬಳಿಗೆ ದಕ್ಷಿಣ ರಾಜ್ಯಗಳ ಅರಣ್ಯ ಸಚಿವರ ನಿಯೋಗ ತೆಗೆದುಕೊಂಡು ಹೋಗಲು ಇಂದಿನ ಸಭೆಯಲ್ಲಿ ಚರ್ಚಿಸಿದ್ದು, ಶೀಘ್ರವೇ ಎಲ್ಲ ಸಚಿವರಿಗೂ ಪತ್ರ ಬರೆಯಲಾಗುವುದು" ಎಂದರು.
"ಆಗಸ್ಟ್ 12ರಂದು ಬೆಂಗಳೂರಿನಲ್ಲಿ ನಡೆದ ಮಾನವ-ಆನೆ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಜಾರ್ಖಂಡ್ ರಾಜ್ಯದ ಸಚಿವರು ಕೂಡ ಕೇಂದ್ರಕ್ಕೆ ನಿಯೋಗದಲ್ಲಿ ಆಗಮಿಸಲು ಸಮ್ಮಿತಿಸಿದ್ದರು" ಎಂದು ತಿಳಿಸಿದರು.
ಇದನ್ನೂ ಓದಿ: ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ: ದೇವಾಲಯ, ಬಸದಿಗಳ ಸರ್ಕ್ಯೂಟ್ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ