ಗಂಗಾವತಿ(ಕೊಪ್ಪಳ): ಹೊಸಪೇಟೆ ನಗರದ ತುಂಗಾಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಇದರಿಂದಾಗಿ ತುಂಗಭದ್ರಾ ಜಲಾಶಯದ 19ನೇ ಚೈನ್ ಲಿಂಕ್ ಕಡಿತವಾಗಿದೆ. ಪರಿಣಾಮ ಭಾರೀ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಈ ಹಿನ್ನೆಲೆ ಕೊಪ್ಪಳ- ಬಳ್ಳಾರಿ ಜಿಲ್ಲೆಗಳ ಮಧ್ಯೆ ಸಂಪರ್ಕ ಕಲ್ಪಿಸುವ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ಕಂಪ್ಲಿ ಸೇತುವೆ ಮೇಲೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕಂಪ್ಲಿ-ಗಂಗಾವತಿ ಮಧ್ಯೆ ಕೇವಲ 9 ಕಿ.ಮೀ ಅಂತರವಿದ್ದು, ಈ ಸೇತುವೆ ಪ್ರಮುಖ ಸಂಪರ್ಕ ಸಾಧನವಾಗಿದೆ. ಕಂಪ್ಲಿ ತಾಲೂಕಿನ ಬಹುತೇಕ ಜನರು ಮಾರುಕಟ್ಟೆ, ಶೈಕ್ಷಣ, ಆಸ್ಪತ್ರೆ ಸೇರಿದಂತೆ ನಾನಾ ಕಾರಣಕ್ಕೆ ನಿತ್ಯ ಗಂಗಾವತಿಗೆ ಬರುತ್ತಾರೆ. ಮುಖ್ಯವಾಗಿ ವಿವಿಧ ಇಲಾಖೆ, ಖಾಸಗಿ ವಲಯದ ಉದ್ಯೋಗಿಗಳು ದೊಡ್ಡ ಪ್ರಮಾಣದಲ್ಲಿ ಗಂಗಾವತಿಗೆ ಬರುತ್ತಾರೆ. ಅಲ್ಲದೇ ಕಂಪ್ಲಿ ಭಾಗದ ರೈತರ ಹೊಲಗಳು ಸೇತುವೆಯ ಮತ್ತೊಂದು ಭಾಗವಾಗಿರುವ ಹಿರೇಜಂತಕಲ್ ಪ್ರದೇಶದಲ್ಲಿದ್ದು, ಬ್ರಿಡ್ಜ್ ಸಂಪರ್ಕ ಕಡಿತವಾಗಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ.
ತುಂಗಭದ್ರಾ ಜಲಾಶಯದ 19ನೇ ಚೈನ್ ಲಿಂಕ್ ಕಡಿತವಾಗಿರುವ ಹಿನ್ನೆಲೆ ಶನಿವಾರ ಮಧ್ಯರಾತ್ರಿಯಿಂದಲೇ ಜಲಾಶಯದ ನೀರು ಖಾಲಿ ಮಾಡುವ ಉದ್ದೇಶಕ್ಕೆ ಹಂತ ಹಂತವಾಗಿ ಹೆಚ್ಚಿನ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ನಿನ್ನೆ ಮಧ್ಯರಾತ್ರಿ 35 ಸಾವಿರ ಕ್ಯೂಸೆಕ್ ಇದ್ದ ಹೊರ ಹರಿವಿನ ಪ್ರಮಾಣ ಭಾನುವಾರ ಮಧ್ಯಾಹ್ನದ ಹೊತ್ತಿಗೆ 90 ಸಾವಿರ ಕ್ಯೂಸೆಕ್ಗೆ ತಲುಪಿತ್ತು. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಎರಡು ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸುವ ಸಾಧ್ಯ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿಪಾತ್ರದಲ್ಲಿನ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಹಿನ್ನೆಲೆ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಹೋಗುವಂತೆ ಜನರಿಗೆ ಜಲಾಶಯದ ಅಧಿಕಾರಿಗಳು, ಜಿಲ್ಲಾಡಳಿತ ಮೂಲಕ ರೆಡ್ ಅಲರ್ಟ್ ಜಾರಿ ಮಾಡಿಸಿ ಜಾಗೃತಿ ಮೂಡಿಸಿದ್ದಾರೆ. ಭಾರೀ ನೀರಿನ ಹರಿವಿನಿಂದ ಆನೆಗೊಂದಿಯ 64 ಕಾಲಿನ ಮಂಟಪ ಸಹ ಜಲಾವೃತವಾಗಿದೆ.
ಇದನ್ನೂ ಓದಿ:ತುಂಗಭದ್ರಾ ಜಲಾಶಯ ಗೇಟ್ ಪರಿಶೀಲಿಸಿದ ಡಿ ಕೆ ಶಿವಕುಮಾರ್; ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ- ಡಿಸಿಎಂ - DCM DK Shivakumar