ಬೆಂಗಳೂರು:ರಾಜಧಾನಿಯ ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಜಾವ ಬೇಕರಿ, ಮೆಡಿಕಲ್ ಶಾಪ್ ಸೇರಿದಂತೆ ಮೂರು ಕಡೆಗಳಲ್ಲಿ ಕಳ್ಳತವಾಗಿದೆ. ಕೆ.ಪಿ. ಅಗ್ರಹಾರದ ಚೋಳೂರು ಪಾಳ್ಯ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ ಮೆಡಿಕಲ್ ಶಾಪ್, ನಂದಿನಿ ಪಾರ್ಲರ್ ಹಾಗೂ ಬೇಕರಿಗಳಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.
ಘಟನೆ ಸಂಬಂಧ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿಯನ್ನು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಸರಣಿ ಕಳ್ಳತನ: ಒಂದೇ ಏರಿಯಾದ ಮೂರು ಕಡೆಗಳಲ್ಲಿ ಕಳ್ಳರ ಕೈಚಳಕ (ETV Bharat) ಶೆಟರ್ ಮುರಿದು ಕಳ್ಳತನ:ಎರಡು ದ್ವಿಚಕ್ರವಾಹನದಲ್ಲಿ ಬಂದಿರುವ ಐವರು ಖದೀಮರು ಬೇಕರಿಯೊಂದರ ಶೆಟರ್ ಮುರಿದು ಸುಮಾರು ಐದು ಸಾವಿರದವರೆಗೂ ಕಳ್ಳತನ ಮಾಡಿದ್ದಾರೆ. ಅಲ್ಲದೇ ಅದೇ ರಸ್ತೆಯಲ್ಲಿರುವ ವಿಶ್ವ ಮೆಡಿಕಲ್ಶಾಪ್ನಲ್ಲಿ ನುಗ್ಗಿ ಕೈ ಸಿಕ್ಕ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಮೂರು ಕಡೆಗಳಲ್ಲಿ ನಡೆದಿರುವ ಕಳ್ಳತನ ಹಿಂದೆ ಒಂದೇ ಗ್ಯಾಂಗ್ ಕೈಚಳಕದ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ವಿಶ್ವ ಮೆಡಿಕಲ್ ಅಂಗಡಿ ಮಾಲೀಕ ಮಂಜುನಾಥ್ ಮಾತನಾಡಿ, "ನಿನ್ನೆ ರಾತ್ರಿ ಎಂದಿನಂತೆ 11 ಗಂಟೆ ಸುಮಾರಿಗೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದೆ. ಇಂದು ಬೆಳಗ್ಗೆ 5.30ಕ್ಕೆ ಅಂಗಡಿ ಮುಂದೆ ಇರುವ ಮನೆಯಲ್ಲಿ ವಾಸವಿರುವ ಯುವಕ ಕರೆ ಮಾಡಿ ವಿಷಯ ತಿಳಿಸಿದ್ದ. ಶೆಟರ್ ಹೊಡೆದು ಕಳ್ಳತನವಾಗಿದೆ. ಏನೆಲ್ಲಾ ಕಳ್ಳತನವಾಗಿದೆ ಎಂಬುದರ ತಿಳಿದು ಬಂದಿಲ್ಲ. ಪೊಲೀಸರು ಪರಿಶೀಲಿಸಿದ ಬಳಿಕ ದೂರು ನೀಡಲಾಗುವುದು" ಎಂದರು.
ಇದನ್ನೂ ಓದಿ:ಶಾಲೆಯಿಂದ 8 ವರ್ಷದ ಬಾಲಕಿ ಕರೆದೊಯ್ದು ಅತ್ಯಾಚಾರ: ಆರೋಪಿ, ಶಾಲಾ ಮುಖ್ಯಸ್ಥ ಬಂಧನ