ದೆಹಲಿ/ಬೆಂಗಳೂರು: ಭಾರತೀಯ ಆಹಾರ ನಿಗಮ 28 ರೂ.ಗೆ ಅಕ್ಕಿ ಕೊಡಲು ತೀರ್ಮಾನಿಸಿದ್ದು, ರಾಜ್ಯಕ್ಕೆ ಬರಬೇಕಾಗಿರುವ ಅಕ್ಕಿ ಖರೀದಿ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಇಂದು ದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿಯನ್ನು ಭೇಟಿಯಾಗಿ ಮಾತನಾಡಿದ ಅವರು, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (FCI) 34 ರೂಪಾಯಿಯಂತೆ ಅಕ್ಕಿ ನೀಡಲಾಗುತ್ತಿತ್ತು. ಈಗ 28 ರೂಪಾಯಿಗೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ನಾನು ಆದಷ್ಟು ಬೇಗ ಸಚಿವರಾದ ಪ್ರಲ್ಹಾದ್ ಜೋಶಿಯವರೊಂದಿಗೆ ಮಾತನಾಡಿ, ನಮ್ಮ ರಾಜ್ಯಕ್ಕೆ ಬೇಕಾಗಿರುವ ಅಕ್ಕಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಬಿಪಿಎಲ್ ಪಡಿತರ ಚೀಟಿಯಲ್ಲಿ ಎರಡು ಭಾಗ ಇದೆ. ಒಂದು ಕೇಂದ್ರ ಸರ್ಕಾರ ಕೊಡುತ್ತದೆ. ಕೇಂದ್ರ ಸರ್ಕಾರ ನಾಲ್ಕು ಕೋಟಿ ಜನಕ್ಕೆ ಅಕ್ಕಿ ಕೊಡುತ್ತದೆ. ನಮ್ಮ ರಾಜ್ಯ ಸರ್ಕಾರ 4 ಕೋಟಿ 50 ಲಕ್ಷ ಬಿಪಿಎಲ್ ಪಡಿತರದಾರರಿಗೆ ಅಕ್ಕಿ ಕೊಡುತ್ತಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕರ್ನಾಟಕದಲ್ಲಿ 13 ಲಕ್ಷ ಬಿಪಿಎಲ್ ಪಡಿತರ ಕಾರ್ಡ್ಗಳನ್ನು ಹೊಂದಿದ್ದು, ಅಂದರೆ 40 ರಿಂದ 50 ಲಕ್ಷ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಅಕ್ಕಿಯನ್ನು ಕೊಡುತ್ತಿದೆ. ಅದಕ್ಕೆ ನಾವು ಕೇಂದ್ರ ಸ್ವಾಮ್ಯದ ಕೇಂದ್ರೀಯ ಭಂಡಾರ ಎನ್.ಸಿ.ಸಿ.ಎಫ್ ಅವರ ಮುಖಾಂತರ ಅಕ್ಕಿಯನ್ನು ಖರೀದಿ ಮಾಡುತ್ತಿದ್ದೇವೆ. ಈಗ ಕೇಂದ್ರ ಸರ್ಕಾರ 28 ರೂಪಾಯಿಗೆ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸರ್ವೇ ಮಾಡಿರುವ ಪ್ರಕಾರ, ಗ್ರಾಹಕರು ಐದು ಕೆಜಿ ಅಕ್ಕಿ ಜೊತೆಗೆ ಬೇಳೆ, ಎಣ್ಣೆ, ಸಕ್ಕರೆ ಮುಂತಾದ ಆಹಾರ ಸಾಮಗ್ರಿಗಳನ್ನು (ಪದಾರ್ಥಗಳನ್ನು) ಕೊಟ್ಟರೆ ಅನುಕೂಲವಾಗುತ್ತದೆ ಎಂದು ರಾಜ್ಯದ 93 ಪರ್ಸೆಂಟ್ ಜನ ಅಭಿಪ್ರಾಯಪಟ್ಟಿದ್ದಾರೆ. ನಾನು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚಿಸಿ ಯಾವ ರೀತಿ ಮಾಡಬೇಕು ಅನ್ನೋದನ್ನು ತೀರ್ಮಾನಿಸಲಾಗುವುದು ಎಂದರು.
ಒಟ್ಟಾರೆ ರಾಜ್ಯ ಸರ್ಕಾರ ನೇರವಾಗಿ ಅಕ್ಕಿಯನ್ನು ಕೊಡುವುದರ ಬದಲಾಗಿ ಹಕ್ಕಿಯ ಜೊತೆ ಬೇಳೆ, ಸಕ್ಕರೆ, ಎಣ್ಣೆ ಮುಂತಾದ ಪದಾರ್ಥಗಳನ್ನು ನೀಡಿ ಎಂದು ಗ್ರಾಹಕರು ಕೇಳುತ್ತಿದ್ದು, ಇದರ ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಬೇಕಾಗುತ್ತದೆ. ಇನ್ನು ಪ್ರತಿ ತಿಂಗಳಿಗೆ 20 ಸಾವಿರ ಮೆಟ್ರಿಕ್ ಟನ್ ಬೇಕಾಗುತ್ತದೆ ಎಂದು ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಪರಿಸರಕ್ಕೆ ಹಾನಿಯಾಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ; ಅರಣ್ಯ ಇಲಾಖೆ ಸಚಿವರೊಂದಿಗೆ ಸಚಿವ ಜಾರ್ಜ್ ಸಮಾಲೋಚನೆ - Sharavathi Project