ಕರ್ನಾಟಕ

karnataka

ETV Bharat / state

ಕುಡಿಯುವ ನೀರು ಕಲುಷಿತಗೊಳ್ಳದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳಿ: ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ - Priyank Kharge - PRIYANK KHARGE

ಕುಡಿಯುವ ನೀರು ಕಲುಷಿತಗೊಳ್ಳದಂತೆ ಮುಂಜಾಗರೂಕತೆ ಕ್ರಮ ಕೈಗೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಂಜಿನಿಯರ್​ಗಳಿಗೆ ಸೂಚನೆ ನೀಡಿದ್ದಾರೆ.

minister-priyank-kharge
ಸಚಿವ ಪ್ರಿಯಾಂಕ್‌ ಖರ್ಗೆ (ETV Bharat)

By ETV Bharat Karnataka Team

Published : Jun 19, 2024, 7:32 PM IST

ಬೆಂಗಳೂರು: ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ. ಮುಂಜಾಗರೂಕತೆ ವಹಿಸದಿದ್ದಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುವ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜಿನಿಯರ್​ಗಳು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಸಂಜೆ ಕರೆದಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಂಜಿನಿಯರ್​ಗಳ ಸಭೆಯಲ್ಲಿ ಸಚಿವರು ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯದ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಜೂನಿಯರ್‌ ಎಂಜಿನಿಯರ್​ಗಳು, ವಾಟರ್‌ಮನ್‌ಗಳು ಹಾಗೂ ಇನ್ನಿತರರಿಗೆ ನೀರಿನ ಗುಣಮಟ್ಟ ಪರೀಕ್ಷೆ ಕುರಿತಂತೆ ತರಬೇತಿ ನೀಡಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮೀಣ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ವಾರಕ್ಕೆ ಒಂದು ದಿನ ಪ್ರವಾಸ ಮಾಡಿ, ನೀರು ಸರಬರಾಜು ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಿ, ಆಯುಕ್ತರಿಗೆ ವರದಿ ಸಲ್ಲಿಸಲು ಸೂಚಿಸಿದರು. ಪ್ರತಿ ತಿಂಗಳು 2ನೆಯ ತಾರೀಖು ತಾವು ನಡೆಸುವ ರಾಜ್ಯ ಮಟ್ಟದ ವಿಡಿಯೊ ಸಭೆಯಲ್ಲಿ ಈ ವರದಿಗಳನ್ನು ಪರಿಶೀಲಿಸುವುದಾಗಿ ಸಚಿವರು ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಎಂಜಿನಿಯರ್​ಗಳ ಸಭೆ (ETV Bharat)

ಕೊಳವೆಬಾವಿಗಳ ಸುತ್ತಮುತ್ತಲೂ ಪರಿಸರವನ್ನು ಶುಚಿಯಾಗಿರಿಸಿಕೊಳ್ಳುವುದು, ತ್ಯಾಜ್ಯನೀರು ಕಾಲುವೆಗಳಲ್ಲಿ ಕುಡಿಯವ ನೀರಿನ ಕೊಳವೆಗಳು ಹಾದು ಹೋಗದಂತೆ ಎಚ್ಚರವಹಿಸುವುದು, ನೀರು ಸರಬರಾಜು ಕೊಳವೆಗಳ ಕೊನೆಗಳಲ್ಲಿ ಬಿಗಿಯಾಗಿ ಎಂಡ್‌ಕ್ಯಾಪ್‌ ಅಳವಡಿಸುವುದು ಸೇರಿದಂತೆ ಹಲವು ಮುಂಜಾಗರೂಕತಾ ಕ್ರಮಗಳ ಮೂಲಕ ನೀರು ಕಲುಷಿತಗೊಳ್ಳುವುದನ್ನು ತಡೆಯಬಹುದು ಎಂದು ತಿಳಿಸಿದರು.

ಯೋಜನೆಗಳ ಅನುಷ್ಠಾನ ವಿಳಂಬ ವಿಚಾರ: ಜಲಜೀವನ್ ಮಿಷನ್‌ ಹಾಗೂ ಬಹುಗ್ರಾಮ ಯೋಜನೆ ಕಾರ್ಯಕ್ರಮಗಳಡಿ ಕೈಗೆತ್ತಿಕೊಂಡಿರುವ ಕೆಲವು ಯೋಜನೆಗಳು ಪೂರ್ಣಗೊಳ್ಳುವಲ್ಲಿ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬೇರೆಲ್ಲ ಯೋಜನೆಗಳಿಗೆ ಹೋಲಿಸಿದಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಅತ್ಯಂತ ಮುಖ್ಯವಾದುದು ಎಂದು ಹೇಳಿದರಲ್ಲದೆ, ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪ್ರಗತಿಯಲ್ಲಿರುವ ಜಿಲ್ಲಾವಾರು ಕಾಮಗಾರಿಗಳ ವಿಮರ್ಶೆ ಮಾಡಿದ ಸಚಿವರು ಹಲವಾರು ಸೂಚನೆ, ಸಲಹೆಗಳನ್ನು ನೀಡಿದರು.

ಇದೇ ವೇಳೆ, ಸಭೆಗೆ ಗೈರಾದ ಎರಡು ಜಿಲ್ಲೆಗಳ ಎಂಜಿನಿಯರ್​ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ಆಯುಕ್ತ ಕೆ.ನಾಗೇಂದ್ರ ಪ್ರಸಾದ್‌, ಮುಖ್ಯ ಅಭಿಯಂತರರಾದ ಎಜಾಜ್‌ ಹುಸೇನ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:ನೀರು ಕಲುಷಿತವಾದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ; ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ - Minister Priyank Kharge

ABOUT THE AUTHOR

...view details