ಭುವನೇಶ್ವರ, ಒಡಿಶಾ: ಇದೇ ಮೊದಲ ಬಾರಿಗೆ ಒಡಿಶಾ ಸರ್ಕಾರ ಮೂರು ದಿನಗಳ ಕಾಲ ಅದ್ದೂರಿಯ ಭಾರತೀಯ ಪ್ರವಾಸಿ ದಿವಸ್ ಆಚರಣೆಗೆ ಸಜ್ಜಾಗಿದೆ. ಜನವರಿ 8 ರಿಂದ ಪ್ರಾರಂಭವಾಗಲಿರುವ ಈ ಕಾರ್ಯಕ್ರಮಕ್ಕೂ ಮುನ್ನ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಭಯೋತ್ಪಾದಕ ದಾಳಿ ನಡೆಸುವ ಬೆದರಿಕೆ ಸಂದೇಶ ರವಾನಿಸಿದ್ದಾನೆ. ವಿಡಿಯೋ ಮೂಲಕ ಸಂದೇಶ ಹಂಚಿಕೊಂಡಿರುವ ಪನ್ನುನ್, ಇದರ ಜೊತೆಗೆ ವಿದೇಶಾಂಗ ಸಚಿವ ಜೈಶಂಕರ್ಗೆ ಕೂಡ ವಾರ್ನಿಂಗ್ ಕೊಟ್ಟಿದ್ದಾನೆ.
ನಿಷೇಧಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಪನ್ನುನ್ ವಕ್ತಾರ ಈ ಕುರಿತು ಹಿರಿಯ ಪತ್ರಕರ್ತರೊಬ್ಬರಿಗೆ ಬೆದರಿಕೆ ಸಂದೇಶ ರವಾನಿಸಿದ್ದು, 18ನೇ ಪ್ರವಾಸಿ ಭಾರತೀಯ ದಿವಸ್ಗೆ ದೊಡ್ಡ ಅಡಚಣೆ ಉಂಟು ಮಾಡುವುದಾಗಿ ತಿಳಿಸಿದ್ದಾನೆ.
ಭುವನೇಶ್ವರ್ ಪ್ರವಾಸಿ ಭಾರತೀಯ ದಿನವನ್ನು ಆಯೋಜಿಸುವ ಮೂಲಕ ದೇಗುಲ ನಗರದ ಬದಲಾಗಿ ಉಗ್ರರ ನಗರ ಎಂಬುದನ್ನು ಸಾಬೀತು ಮಾಡಲಿದೆ. ಈ ಕಾರ್ಯಕ್ರಮವನ್ನು ಭಾರತೀಯ ಹಿಂದೂ ಉಗ್ರ ಮುಖವಾದ ನರೇಂದ್ರ ಮೋದಿ ಅವರು ಉದ್ಭಾಟಿಸಲಿದ್ದಾರೆ ಎಂದು ಪನ್ನುನ್ ತನ್ನ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾನೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಲು ನೋಂದಣಿ ಮಾಡುವಂತೆ ಕೂಡ ಖಲಿಸ್ತಾನಿ ಪರ ಕಾರ್ಯಕರ್ತರಿಗೆ ಕರೆ ನೀಡಿದ್ದಾನೆ.
ವಿದೇಶಾಂಗ ಸಚಿವ ಜೈ ಶಂಕರ್ಗೆ ಎಚ್ಚರಿಕೆ: ವಿದೇಶಾಂಗ ಸಚಿವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಪನ್ನುನ್ ಜೈ ಶಂಕರ್ ಭಾರತೀಯ ಹಿಂದೂ ಉಗ್ರರ ನೆಟ್ವರ್ಕ್ನ ಮುಖವಾಗಿದ್ದಾರೆ. ಅವರು, ಗೂಢಚಾರರ ನೆಟ್ವರ್ಕ್ ಅಭಿಯಾನವನ್ನು ಪುನರ್ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದಾರೆ. ಖಲಿಸ್ತಾನಿ ಪರ ಸಿಖ್ಖರು ನಿಮ್ಮನ್ನು ಶೂನ್ಯಗೊಳಿಸಲಿದ್ದಾರೆ ಎಂದು ಆತ ತನ್ನ ಸಂದೇಶದಲ್ಲಿ ಎಚ್ಚರಿಸಿದ್ದಾನೆ.
ಭಾರತೀಯ ಅಮೆರಿಕನ್ ಹಿಂದೂಗಳು ಮತ್ತು ಹಿಂದೂ - ಕೆನಡಿಯನ್ ಹಿಂದೂಗಳು ವಾಸಿಸುವ ನಿಮ್ಮ ಆತಿಥೇಯ ದೇಶಗಳಿಗೆ ನಿಷ್ಠರಾಗಿರಲು ನಿಮಗೆ ಅವಕಾಶವಿದೆ. ಭುವನೇಶ್ವರ ವಿಮಾನ ನಿಲ್ದಾಣದಿಂದ ಜನತಾ ಮೈದಾನದವರೆಗೆ ದೂರವಿರಿ, ಸುರಕ್ಷಿತವಾಗಿರಿ ಮತ್ತು ಎಚ್ಚರವಾಗಿರಿ ಎಂದು ಪನ್ನುನ್ ತನ್ನ ಸಂದೇಶದಲ್ಲಿ ಎಚ್ಚರಿಸಿದ್ದಾನೆ
ಈ ಪ್ರಕರಣ ಕುರಿತು ಒಡಿಶಾ ಸಿಬಿ- ಸಿಐಡಿ, ಎಡಿಜಿಪಿ ವಿಜಯ್ತೋಷ್ ಮಿಶ್ರಾ ಅವರನ್ನು ಈಟಿವಿ ಭಾರತ್ ಸಂಪರ್ಕಿಸಲು ಪ್ರಯತ್ನಿಸಿತಾದರೂ ಅವರು, ಕರೆ ಸ್ವೀಕರಿಸಲಿಲ್ಲ.
ಏನಿದು ಪ್ರವಾಸಿ ಭಾರತೀಯ ದಿನಸ್: ಸಾಗರೋತ್ತರ ಭಾರತೀಯ ಸಮುದಾಯ ಮತ್ತು ಭಾರತೀಯ ಸರ್ಕಾರದ ನಡುವೆ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮತ್ತು ಪುನರ್ಸಂಪರ್ಕ ಕಲ್ಪಿಸುವಲ್ಲಿ ಹಾಗೂ ಸಂಬಂಧ ಬಲಗೊಳಿಸುವ ನಿಟ್ಟಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. ಈ ಬಾರಿ 18ನೇ ಪ್ರವಾಸಿ ಭಾರತೀಯ ದಿವಸವನ್ನು ಒಡಿಶಾದಲ್ಲಿ ಜನವರಿ 8 ರಂದು ಆಚರಣೆ ಮಾಡಲಾಗುವುದು.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಪ್ರಕರಣ: 10 ಸಿಪಿಐ - ಎಂ ಕಾರ್ಯಕರ್ತರಿಗೆ ಡಬಲ್ ಜೀವಾವಧಿ ಶಿಕ್ಷೆ