ಕರ್ನಾಟಕ

karnataka

ETV Bharat / state

ಮೈಸೂರು ದಸರಾ: ಗಜಪಡೆ, ಅಶ್ವದಳಕ್ಕೆ ಎರಡನೇ ಹಂತದ ಸಿಡಿಮದ್ದು ತಾಲೀಮು - Explosive training - EXPLOSIVE TRAINING

ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಇಂದು ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಎರಡನೇ ಸುತ್ತಿನ ಸಿಡಿಮದ್ದು ತಾಲೀಮು ನಡೆಸಿತು.

MYSURU DASARA: SECOND PHASE OF EXPLOSIVE TRAINING FOR DASARA ELEPHANTS
ಗಜಪಡೆ ಹಾಗೂ ಅಶ್ವದಳಕ್ಕೆ ಎರಡನೇ ಹಂತದ ಸಿಡಿಮದ್ದು ತಾಲೀಮು (ETV Bharat)

By ETV Bharat Karnataka Team

Published : Sep 29, 2024, 4:16 PM IST

Updated : Sep 29, 2024, 4:48 PM IST

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾದ ಸಿದ್ಧತೆಗಳು ಭರದಿಂದ ಸಾಗಿದ್ದು, ಇಂದು ಗಜಪಡೆ ಹಾಗೂ ಅಶ್ವದಳಕ್ಕೆ ಎರಡನೇ ಹಂತದ ಸಿಡಿಮದ್ದು ತಾಲೀಮನ್ನು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ನಡೆಸಲಾಯಿತು.

ಜಂಬೂ ಸವಾರಿಯ ದಿನ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವಾಗ 21 ಸುತ್ತಿನ ಕುಶಾಲತೋಪು ಸಿಡಿಸಲಾಗುತ್ತದೆ. ಇದರ ಎರಡನೇ ಹಂತದ ತಾಲೀಮನ್ನು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ನಡೆಸಿದವು.

ಗಜಪಡೆ ಹಾಗೂ ಅಶ್ವದಳಕ್ಕೆ ಎರಡನೇ ಹಂತದ ಸಿಡಿಮದ್ದು ತಾಲೀಮು (ETV Bharat)

ಈ ಸಿಡಿಮದ್ದು ತಾಲೀಮಿನಲ್ಲಿ ಅಭಿಮನ್ಯು ನೇತೃತ್ವದ 12 ಆನೆಗಳು, 30 ಮೌಂಟೆಡ್ ಪೊಲೀಸ್ ಅಶ್ವದಳ ಹಾಗೂ ಪುರಾತನ ‌ಕಾಲದ 7 ಫಿರಂಗಿಗಳು ಭಾಗವಹಿಸಿದ್ದವು. ಫಿರಂಗಿಗಳಿಂದ ಮೂರು ಸುತ್ತು 21 ಕುಶಾಲತೋಪುಗಳನ್ನು ಹಾರಿಸಲಾಯಿತು. ಈ ಶಬ್ಧಕ್ಕೆ ಗಜಪಡೆ ಹಾಗೂ ಅಶ್ವದಳ ಹೆದರದೆ ಧೈರ್ಯವಾಗಿ ಇದ್ದರೆ‌ ಪ್ರಶಾಂತ್ ಆನೆ ಮಾತ್ರ ಸ್ವಲ್ಪ ಗಲಿಬಿಲಿಗೊಂಡಿದ್ದು ಕಂಡುಬಂತು.

ನಂತರ ಸಿಡಿದ ಫಿರಂಗಿ ಗಾಡಿಗಳ ಬಳಿ‌ ಗಜಪಡೆ ಹಾಗೂ ಅಶ್ವದಳವನ್ನು ಕರೆದುಕೊಂಡು ಬಂದು‌ ಸಿಡಿಮದ್ದು ಸಿಡಿದ ವಾಸನೆಯನ್ನು ತೋರಿಸಲಾಯಿತು. ಮೂರನೇ ಹಾಗೂ ಕೊನೆಯ ಹಂತದ ಸಿಡಿಮದ್ದು ‌ತಾಲೀಮನ್ನು ಇದೇ ಮೈದಾನದಲ್ಲಿ ಅ. 1 ರಂದು ನಡೆಸಲಾಗುತ್ತದೆ.

ಈ ಕುರಿತು ಡಿಸಿಎಫ್ ಪ್ರಭುಗೌಡ ಮಾತನಾಡಿ, "ದಸರಾ ಗಜಪಡೆಗೆ ಒಟ್ಟು 3 ಹಂತದ ಶಬ್ಧದ ತಾಲೀಮು ನಡೆಸಲಾಗುತ್ತದೆ. ಎಲ್ಲ ಆನೆಗಳು ಕೂಡ ಧೈರ್ಯದಿಂದ ಶಬ್ಧಕ್ಕೆ ಹೆದರದೆ ಮುಂದೆ ಬಂದಿವೆ. ಯಾವ ಅನೆಯೂ ಹೆದರಲಿಲ್ಲ. ಎಲ್ಲ ಆನೆಗಳು ದಸರಾಗೆ ಸಿದ್ಧಗೊಂಡಿವೆ. ದಸರಾ ನೌಪತ್ ಮತ್ತು ನಿಶಾನೆ ಅನೆಯ ಬಗ್ಗೆ ಎರಡು ದಿನಗಳಲ್ಲಿ‌ ತಿಳಿಸಲಾಗುತ್ತದೆ" ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ದಸರಾ ಆನೆಗಳ ರೀಲ್ಸ್ ವೈರಲ್:"ಜನರು ಆನೆಗಳು ತಾಲೀಮು ನಡೆಸುವಾಗ ಸಹ ಫೋಟೋ ವಿಡಿಯೋಗಳನ್ನು ತೆಗೆದುಕೊಳ್ಳುತ್ತಾರೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ‌ ಹಾಕುತ್ತಿದ್ದು, ವೈರಲ್ ಅಗುತ್ತವೆ. ಆನೆ ವನ್ಯಜೀವಿಯಾಗಿದ್ದು ಅದರ ಸಂರಕ್ಷಣೆ ಬಗ್ಗೆ ಜನರಿಗೆ ಅರಿವಿರಬೇಕು. ಅವುಗಳ ಫೋಟೋ ಮತ್ತು ವಿಡಿಯೋಗಳನ್ನು ಯಾವುದೇ ದುರುದ್ದೇಶಕ್ಕೆ ಬಳಸಬೇಡಿ. ಜನರು ಫೋಟೋ ತೆಗೆದುಕೊಂಡಿರುವುದನ್ನು ನನಗೆ ಕಳುಹಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಇದೆಲ್ಲ ಸರಿಯಾಗುವುದಿಲ್ಲ. ನಾವು ಇಲ್ಲಿಗೆ ಯಾವುದೇ ಕಾರ್ಯಾಚರಣೆಗೆ ಬಂದಿಲ್ಲ. ಆನೆಗಳನ್ನು ದೂರದಿಂದ ನೋಡಿ ಖುಷಿ ಪಡಿ, ಆನೆಗಳ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರೆ, ಅವುಗಳನ್ನು ಡಿಲಿಟ್ ಮಾಡಿ. ನಿಮಗೆ ಈಗಾಗಲೇ ಅರಣ್ಯ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಕ್ಕಳನ್ನು ಕರೆದುಕೊಂಡು ಆನೆ ಬಳಿ ಬರಬೇಡಿ. ದೂರದಿಂದಲೇ ಫೋಟೋ ತೆಗೆದುಕೊಂಡು ಖುಷಿಪಡಿ" ಎಂದು ಮನವಿ ಮಾಡಿದರು.

"ಎಲ್ಲ ಆನೆಗಳ ಆರೋಗ್ಯ ಚನ್ನಾಗಿದೆ. ಯಾವುದೇ ತೊಂದರೆ ಇಲ್ಲ. ಕಳೆದ ಬಾರಿ‌ ಕುಶಾಲತೋಪು ತಾಲೀಮಿಗಿಂತ ಎರಡು ಕೆ.ಜಿ ಹೆಚ್ಚಿಗೆ ಮದ್ದನ್ನು ಸೇರಿಸಲಾಯಿತು. ಆದರೂ ಕೂಡ ಯಾವುದೇ ಆನೆಗಳು ಗಲಿಬಿಲಿ ಆಗಲಿಲ್ಲ. ಈಗಾಗಲೇ ಆನೆಗಳಿಗೆ ಮೊದಲನೇ ಬಾರಿ ತೂಕ ಪರೀಕ್ಷೆ ಮಾಡಲಾಗಿದೆ. ಇನ್ನೂ ಎರಡು ಮೂರು ದಿನಗಳಲ್ಲಿ ಮತ್ತೊಂದು ಬಾರಿ ತೂಕ ಪರೀಕ್ಷೆ ಮಾಡಲಾಗುತ್ತದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಮೈಸೂರು: ದಸರಾ ಸಿಡಿಮದ್ದು, ಆರಂಭದಲ್ಲಿ ಹೆದರದ ಗಜಪಡೆ 4ನೇ ಹಂತದ ತಾಲೀಮಿನಲ್ಲಿ ಗಲಿಬಿಲಿ - DASARA ELEPHANTS AFRAID

Last Updated : Sep 29, 2024, 4:48 PM IST

ABOUT THE AUTHOR

...view details