ಬೆಂಗಳೂರು: ಮೋದಿ ಎಂದರೆ ಮಾಸ್ಟರ್ ಆಫ್ ಡಿಜಿಟಲ್ ಇನ್‍ಫಾರ್ಮೇಶನ್ ಅಥವಾ ಮೇಕರ್ ಆಫ್ ಡೆವಲಪ್ಡ್ ಇಂಡಿಯಾ (ವಿಕಸಿತ ಭಾರತ) ಎಂದು ಕರೆಯಬಹುದು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ''ವಿಕಸಿತ ಭಾರತ''ದ ಸಂಕಲ್ಪ ಮೋದಿ ಅವರದ್ದಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದರು.
ದಿ ಕ್ಯಾಪಿಟಲ್ ಹೋಟೆಲ್‍ನಲ್ಲಿ ಗುರುವಾರ ನಡೆದ ಸಾಫ್ಟ್‌ವೇರ್ ತಂತ್ರಜ್ಞರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ಭಾರತ ಮತ್ತು ಭಾರತೀಯರು ಕಾಂಗ್ರೆಸ್ ಮತ್ತು ಆ ಸರ್ಕಾರದ ಭಾಗೀದಾರ ಪಕ್ಷಗಳ ಭ್ರಷ್ಟಾಚಾರ ಹಗರಣಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಚಿಂತಿಸುವ ಸ್ಥಿತಿ ಇತ್ತು. ಕಾಮನ್‍ವೆಲ್ತ್ ಗೇಮ್ಸ್ ಹಗರಣ, ಕಲ್ಲಿದ್ದಲು ಹಗರಣ, ಅಂತರಿಕ್ಷ್ ದೇವಾಸ್ ಹಗರಣ ಮೊದಲಾದವುಗಳ ಬಗ್ಗೆ ಇಂದಿನ 18-22ರ ಹರೆಯದ ಯುವಜನರಿಗೆ ಅರಿವಿರಲಾರದು. 2009ರಿಂದ 2014ರ ನಡುವೆ ಒಂದಾದ ನಂತರ ಒಂದು ಹಗರಣಗಳು ನಡೆದವು. 2014ರಲ್ಲಿ ಅಭಿವೃದ್ಧಿ ಸ್ಥಗಿತವಾಗಿತ್ತು. ದೇಶದಲ್ಲಿ ಹಣದುಬ್ಬರ ಹೆಚ್ಚಾಗಿತ್ತು. ಅಸಮರ್ಪಕ ನೀತಿಯಿಂದ ದೇಶಕ್ಕೆ ಸಮಸ್ಯೆ ಉಂಟಾಗಿತ್ತು. ಆಗ ಬಿಜೆಪಿ ಆಡಳಿತಕ್ಕೆ ಬಂತು. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆಡಳಿತ ಆರಂಭವಾಯಿತು. ಸ್ವಚ್ಛ-ಪ್ರಾಮಾಣಿಕ ಆಡಳಿತವನ್ನು ನೀಡುವುದಾಗಿ ತಿಳಿಸಿದೆವು. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರದ ಒಬ್ಬರೇ ಒಬ್ಬ ಸಚಿವರ ವಿರುದ್ಧ ಒಂದು ಪೈಸೆಯ ಭ್ರಷ್ಟಾಚಾರದ ಆರೋಪಗಳಿಲ್ಲ ಎಂದು ವಿವರಿಸಿದರು.
ಐಟಿ ಎಂದರೆ ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಲ್ಲ, ಅದನ್ನು ಇಂಡಿಯಾ ಟುಮಾರೊ (ಭವಿಷ್ಯದ ಭಾರತ) ಎಂದೂ ಅರ್ಥೈಸಬಹುದು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ 'ವಿಕಸಿತ ಭಾರತ'ದ ಸಂಕಲ್ಪವಾಗಿದೆ. ಐಟಿ ಕುರಿತು ಮಾತನಾಡುವಾಗ ಇನ್‍ಫ್ರಾ (ಮೂಲಸೌಕರ್ಯ) ಮತ್ತು ಟೆಕ್ನಾಲಜಿ (ತಂತ್ರಜ್ಞಾನ) ಕುರಿತು ಮಾತನಾಡಬೇಕಾಗುತ್ತದೆ. ಸಾರ್ವಜನಿಕ ಮೂಲಸೌಕರ್ಯ, ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ವರ್ಷ 10 ಲಕ್ಷ ಕೋಟಿ ರೂ. ವ್ಯಯಿಸಿದ್ದರೆ, ಈ ವರ್ಷ 11 ಲಕ್ಷ ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದ್ದೇವೆ. ಐಟಿ ಎಂದರೆ ಇಂಡಿಯನ್ ಟ್ಯಾಲೆಂಟ್, ಅದು ನಮ್ಮ ಜೊತೆಗಿದೆ. ಕೌಶಲ್ಯ ವೃದ್ಧಿ ಮೂಲಕ ಅದರ ಸಮರ್ಥ ಬಳಕೆ ಮಾಡುತ್ತಿದ್ದೇವೆ. ಇಂಡಿಯನ್ ಟ್ಯಾಲೆಂಟ್ ಭಾರತಕ್ಕೆ ಮಿಲಿಯಗಟ್ಟಲೆ ಹಣ, ಉದ್ಯೋಗವನ್ನು ತರಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾನೂನಿಗಿಂತ ಅತೀತವಲ್ಲ: ಐಟಿ ಎಂದರೆ ಇಂಡಿಯನ್ ಟೂರಿಸಂಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು ಇನ್‍ಕಂ ಟ್ಯಾಕ್ಸ್ ಕುರಿತು ಮಾತನಾಡುತ್ತಿದೆ ಎಂದು ನಗುತ್ತಾ ನುಡಿದರು. ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿಲ್ಲ. ನೀವು ರಿಟರ್ನ್ ಫೈಲ್ ಮಾಡದೇ ಇದ್ದರೆ ನೋಟಿಸ್ ಸಿಗುತ್ತದೆ. ನಾವು ಕಾಂಗ್ರೆಸ್ ಪಕ್ಷವನ್ನು ಕಾನೂನಿನಿಂದ ಅತೀತ ಎಂದು ಭಾವಿಸಬೇಕೇ ಎಂದು ಪ್ರಶ್ನಿಸಿದರು. ಆದಾಯ ತೆರಿಗೆ ಇಲಾಖೆಯ ನೋಟಿಸ್‍ಗೆ ಕಾಂಗ್ರೆಸ್ ಪಕ್ಷ ಉತ್ತರ ಕೊಡಲಿಲ್ಲ. ಅವರ ದುರಹಂಕಾರಕ್ಕೆ ಇದೇ ಉದಾಹರಣೆ. ಅವರು ಕೋರ್ಟ್ನಲ್ಲಿ ಸೋತರು. ಆದರೆ, ಭಾರತವು ಐಟಿ (ಆದಾಯ ತೆರಿಗೆ) ವಿಭಾಗದಲ್ಲಿ ಗೆದ್ದಿದೆ. ದೇಶದ ಆದಾಯ ತೆರಿಗೆ ಸಂಗ್ರಹ ಹೆಚ್ಚುತ್ತಾ ಸಾಗಿದೆ ಎಂದು ವಿವರಿಸಿದರು.