ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿರುವ ಆರೋಪದಲ್ಲಿ ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಜನವರಿ 30ರವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಕೋರಿ ಸಿ.ಟಿ.ರವಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ ಪೀಠ ಹೇಳಿದ್ದೇನು?: ''ಅರ್ಜಿದಾರರು ವಿಧಾನಪರಿಷತ್ನಲ್ಲಿ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದ್ದಾಗಿದ್ದು, ಈ ಸಂಬಂಧ 2024ರ ಡಿಸೆಂಬರ್ 19ರಂದು ದೂರು ದಾಖಲಾಗಿದೆ. ದೂರು ದಾಖಲಾಗುವುದಕ್ಕೂ ಮುನ್ನ ವಿಧಾನಪರಿಷತ್ ಸಭಾಧ್ಯಕ್ಷರು ಆ ಕುರಿತ ವಿಚಾರಣಾ ಪ್ರಕ್ರಿಯೆ ಮುಕ್ತಾಯಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ, ಅರ್ಜಿದಾರರ ಪರ ವಕೀಲರು ಸೀತಾ ಸೊರೆನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಏಳು ಮಂದಿ ನ್ಯಾಯಮೂರ್ತಿಗಳ ನೀಡಿರುವ ತೀರ್ಪು ಉಲ್ಲೇಖಿಸಿ, ವಿಧಾನಮಂಡಲದಲ್ಲಿ ನಡೆಯುವ ಶಾಸಕರ ನಡುವೆ ನಡೆಯುವ ಚರ್ಚೆಗಳು ಅವರಿಗೆ ಲಭ್ಯವಾಗಿರುವ ಹಕ್ಕಾಗಿದ್ದು, ಈ ಪ್ರಕ್ರಿಯೆಯಲ್ಲಿ ವಿನಾಯ್ತಿ ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ'' ಎಂದು ಪೀಠವು ಹೇಳಿತು.
''ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ಎಸ್ಪಿಪಿ, ಶಾಸನ ಸಭೆಯಲ್ಲಿ ಈ ರೀತಿಯ ಅಪರಾಧ ಕೃತ್ಯಗಳು ನಡೆದ ಸಂದರ್ಭದಲ್ಲಿ ಈ ಹಕ್ಕುಗಳು ಲಭ್ಯವಾಗುವುದಿಲ್ಲ. ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಪ್ರಕರಣದ ಕುರಿತ ವಿಷಯ ವಿಚಾರಣೆಗೆ ನ್ಯಾಯವ್ಯಾಪ್ತಿಗೆ ಸಂಬಂಧಿಸಿದ್ದಾಗಿದ್ದು, ಪ್ರಕರಣವನ್ನು ಸ್ಪೀಕರ್, ಮುಕ್ತಾಯಗೊಳಿಸಬಹುದೇ ಇಲ್ಲವೇ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಬಹುದೇ ಎಂಬುದಕ್ಕೆ ಸಂಬಂಧ ಸುಧೀರ್ಘ ವಿಚಾರಣೆ ನಡೆದು ಅದಕ್ಕೆ ಉತ್ತರಿಸಬೇಕಾಗಿದೆ'' ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು. ಅಲ್ಲದೆ, ಅಲ್ಲಿಯವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿ ಆದೇಶಿಸಿತು.
ವಾದ, ಪ್ರತಿವಾದ ಹೀಗಿತ್ತು: ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ವಕೀಲರು, ''ಘಟನೆ ಶಾಸನ ಸಭೆಯಲ್ಲಿ ನಡೆದಿದ್ದಾಗಿದ್ದು, ಕಾರ್ಯಾಂಗ (ಪೊಲೀಸರು) ಶಾಸಕಾಂಗದ ಕಾರ್ಯಗಳಿಗೆ ಪ್ರವೆಶಿಸಬಹುದೇ ಎಂಬ ಅಂಶ ಪರಿಶೀಲಿಸಬೇಕಾಗಿದೆ'' ಎಂದು ತಿಳಿಸಿದರು. ಇದಕ್ಕೆ ಪೀಠ, ''ಘಟನೆ ನಡೆಸಿರುವುದು ವಿಧಾನಪರಿಷತ್ನಲ್ಲಿಯೇ'' ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು ''ಹೌದು'' ಎಂದು ತಿಳಿಸಿದರು.
ಸರ್ಕಾರಿ ವಕೀಲರನ್ನು ಉದ್ದೇಶಿಸಿದ ಪೀಠ, ''ಪ್ರಕರಣ ವಿಧಾನಪರಿಷತ್ಗೆ ಸಂಬಂಧಿಸಿದ ವಿಚಾರವಾಗಿದೆ. ತನಿಖೆಯನ್ನು ಸಿಐಡಿಗೆ ವಹಿಸಿರುವುದು ಕಾನೂನಿಗೆ ವಿರುದ್ಧವಾಗಿದೆ. ಈ ಬಗ್ಗೆ ಸಭಾಪತಿಯೊಂದಿಗೆ ಚರ್ಚೆಸಲಾಗಿದೆಯೇ?'' ಎಂದು ಪ್ರಶ್ನಿಸಿತು. ಇದಕ್ಕೆ ಸರ್ಕಾರಿ ವಕೀಲರು, ''ಘಟನೆ ನಡೆದ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿರಲಿಲ್ಲ'' ಎಂದು ಪೀಠಕ್ಕೆ ಮಾಹಿತಿ ನೀಡಿದರು.
ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪೀಠ, ''ಅಧಿವೇಶನ ನಡೆಯಲಿ, ಇಲ್ಲವೇ ನಡೆಯದೇ ಇರಲಿ. ಶಾಸಕರಿಗೆ ಹಕ್ಕಿದೆ ಎಂದ ಮಾತ್ರಕ್ಕೆ ಏನು ಬೇಕಾದರೂ ಮಾತನಾಡಬಹುದು ಎಂದು ಸಲಹೆ ನೀಡುವಿರೇ'' ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು, ''ಸದನದ ಒಳಗೆ ಏನೇ ಮಾತನಾಡಿದರೂ ಅದಕ್ಕೆ ಶಾಸಕರಿಗೆ ವಿನಾಯ್ತಿ ಇರಲಿದೆ'' ಎಂದು ತಿಳಿಸಿದರು.
ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಪೀಠದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ''ನಮ್ಮ ಕಕ್ಷಿದಾರರು ಮಾತನಾಡಿರುವ ಕುರಿತು ಸ್ಪೀಕರ್ ವಿಚಾರಣೆ ನಡೆಸಿದ್ದು, ಆರೋಪದಂತೆ ಏನೂ ನಡೆದಿಲ್ಲ ಎಂಬುದಾಗಿ ತಿಳಿಸಿದ್ದಾರೆ. ರೆಕಾರ್ಡ್ ಆಗಿರುವುದಲ್ಲಿ ಅರ್ಜಿದಾರರು ಬಳಸಿದ್ದಾರೆ ಎನ್ನಲಾದ ಪದಗಳು ಬಹಿರಂಗಗೊಂಡಿಲ್ಲ. ಹೀಗಾಗಿ ಸ್ಪೀಕರ್ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ'' ಎಂದು ವಿವರಿಸಿದರು.
ತಮ್ಮ ಸ್ಥಾನದಲ್ಲಿ ಇಲ್ಲದ ಕಾರಣ ವಿಚಾರಣೆ ನಡೆಸುವ ಅಧಿಕಾರ ಸಭಾಪತಿಗಿಲ್ಲ: ಈ ವೇಳೆ ದೂರಿನ ಸಂಬಂಧ ವಿವರಿಸಿದ ಸರ್ಕಾರಿ ವಕೀಲರು, ''ಘಟನೆ ನಡೆದ ದಿನ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ವಿಧಾನಪರಿಷತ್ನಲ್ಲಿ ನಡೆದ ವಿರೋಧ ಪಕ್ಷಗಳ ಪ್ರತಿಭಟನೆಯಿಂದ ಸದನವನ್ನು ಮುಂದೂಡಲಾಗಿತ್ತು. ಹೀಗಾಗಿ, ಸಭಾಪತಿ ತಮ್ಮ ಸ್ಥಾನದಲ್ಲಿರಲಿಲ್ಲ. ಆದ್ದರಿಂದ ಘಟನೆ ನಡೆದ ಸಂದರ್ಭದಲ್ಲಿ ಸಭಾಪತಿ ತಮ್ಮ ಸ್ಥಾನದಲ್ಲಿ ಇಲ್ಲದ ಕಾರಣ ವಿಚಾರಣೆ ನಡೆಸುವ ಅಧಿಕಾರ ಅವರಿಗೆ ಇರುವುದಿಲ್ಲ. ಸರ್ಕಾರವೇ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳು ಅರ್ಜಿದಾರರು ಬಳಸಿರುವ ಪದಗಳನ್ನು ಸೆರೆಹಿಡಿದಿವೆ. ಘಟನೆ ಸಂಬಂಧ ಧ್ವನಿಸುರಳಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ರವಾನಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ'' ಎಂದು ಪೀಠಕ್ಕೆ ತಿಳಿಸಿದರು.
ಈ ವೇಳೆ ಪೀಠ, ''ಸಭಾಪತಿಗಳು ತಮ್ಮ ಸ್ಥಾನದಲ್ಲಿ ಇಲ್ಲ ಎಂದ ಮಾತ್ರಕ್ಕೆ ಏನು ಬೇಕಾದರೂ ವಿಚಾರಣೆ ನಡೆಸಬಹುದೇ'' ಎಂದು ಮೌಖಿಕವಾಗಿ ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಸರ್ಕಾರಿ ವಕೀಲರು, ''ಘಟನೆ ನಡೆದ ವೇಳೆ ಸದನವನ್ನು ಮುಂದೂಡಲಾಗಿದೆ. ಈ ವಿಷಯವನ್ನು ಸವಿವರವಾಗಿ ವಿಚಾರಣೆ ನಡೆಸಬೇಕಾಗಿದೆ. ಅಲ್ಲದೆ, ಪ್ರಕರಣ ಬಿಎನ್ಎಸ್ನ ಸೆಕ್ಷನ್ 79ರ (ಮಹಿಳೆ ಘನೆತೆಗೆ ಧಕ್ಕೆ) ಅಡಿಯಲ್ಲಿ ದಾಖಲಾಗಿದ್ದು, ಕ್ರಿಮಿನಲ್ ಕೃತ್ಯ ಶಾಸಕರಿಗೆ ನೀಡಿರುವ ಹಕ್ಕು ಎಂಬುದಾಗಿ ವಿನಾಯ್ತಿ ಅಡಿಯಲ್ಲಿ ಬರಲಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ'' ಎಂದು ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ, ಅಂತಿಮವಾಗಿ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು.
ಇದನ್ನೂ ಓದಿ: ಕಮಾಂಡ್ ಆಸ್ಪತ್ರೆ ವಿಸ್ತರಣೆಗೆ 530 ಮರ ಕತ್ತರಿಸಲು ಬಿಬಿಎಂಪಿ ಅನುಮತಿಗೆ ಹೈಕೋರ್ಟ್ ತಡೆ