ಬೆಂಗಳೂರು: "ಅಪಘಾತ ಪೂರ್ವನಿಯೋಜಿತ ಕೃತ್ಯ ಅಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಹಣ ಸಾಗಾಟ ಮಾಡಿದ್ರು ಅನ್ನೋದು ತಪ್ಪು" ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸ್ಪಷ್ಟಪಡಿಸಿದ್ದಾರೆ.
ಅವರು ಸುಳ್ಳು ಆರೋಪ ಮಾಡ್ತಿದ್ದಾರೆ: ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "ಛಲವಾದಿ ನಾರಾಯಣಸ್ವಾಮಿ ಮಾತು ಕೇಳಿದೆ. ಪರಿಷತ್ನಲ್ಲಿ ಅವರು ಪ್ರತಿಪಕ್ಷ ನಾಯಕರು. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾರದ್ದೋ ಪ್ರಭಾವದಲ್ಲಿ ಆರೋಪ ಮಾಡುತ್ತಿದ್ದಾರೆ ಅನ್ನಿಸುತ್ತಿದೆ. ಅಪಘಾತ ಪ್ರಕರಣದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಮಹಿಳೆ ಅಪಘಾತದಿಂದ ಆಸ್ಪತ್ರೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಂಥ ಮಾತು ಬೇಕಾ?" ಎಂದು ಪ್ರಶ್ನಿಸಿದರು.
ಆಂತರಿಕ ಕಚ್ಚಾಟ ಮುಚ್ಚಿಹಾಕಲು ಈ ಆರೋಪ: "ಅವರ ಆಂತರಿಕ ಕಚ್ಚಾಟಗಳು ಹೆಚ್ಚಿವೆ. ಅದಕ್ಕೆ ಇಂತಹ ಆರೋಪ ಮಾಡ್ತಿದ್ದಾರೆ. ನಾವು ಪ್ರಯಾಣ ಮಾಡಿದ್ದು ಸರ್ಕಾರಿ ವಾಹನದಲ್ಲಿ. ಸರ್ಕಾರಿ ಚಾಲಕ, ಸರ್ಕಾರಿ ಗನ್ ಮ್ಯಾನ್ ಇದ್ರು. ನಾವು ನಾಲ್ಕು ಜನ ಕಾರಿನಲ್ಲಿ ಇದ್ದೆವು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೊರಟ್ಟಿದ್ದೆವು. ಎಸ್ಕಾರ್ಟ್ ಅನ್ನು ನಾವು ಕೊಂಡೊಯ್ದಿರಲಿಲ್ಲ" ಎಂದರು.
ಎಲ್ಲೂ ಟಿಪಿ ಹಾಕಬೇಕು ಎಂಬುದಿಲ್ಲ: ಟಿಪಿ ಇಲ್ಲದೇ ಸಚಿವರು ಪ್ರವಾಸ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, "ಎಲ್ಲೂ ಟಿಪಿ ಹಾಕಬೇಕು ಎಂಬುದಿಲ್ಲ. ಸರ್ಕಾರಿ ಕಾರ್ಯಕ್ರಮ ಆಗಿದ್ದರೆ ಟಿಪಿ ಹಾಕಬೇಕಿತ್ತು. ಖಾಸಗಿ ಕಾರ್ಯಕ್ರಮಕ್ಕೆ ಟಿಪಿ ಬೇಕಿಲ್ಲ. ಸಚಿವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಹಾಗಾಗಿ ನಾವು ಶಾಕ್ನಲ್ಲಿದ್ದೆವು. ಅಕ್ಕನಿಗೆ ನಿಲ್ಲೋಕೆ ಆಗ್ತಿರಲಿಲ್ಲ. ಅವರಿಗೆ ಬೆನ್ನು ನೋವು ಹೆಚ್ಚಿತ್ತು. ಹಾಗಾಗಿ ಮಹಜರ್ ಮಾಡಿಸಬೇಕು ಅನ್ನೋದು ಗೊತ್ತಿರಲಿಲ್ಲ" ಎಂದರು.
ಜೀವ ಹೋಗುವ ಸಮಯದಲ್ಲಿ ನಿಯಮಗಳೆಲ್ಲ ನೆನಪಿಗೆ ಬರುತ್ತಾ ನೀವೇ ಹೇಳಿ: "ಅದು ತಪ್ಪೋ ಸರಿಯೋ ಗೊತ್ತಿಲ್ಲ. ನಾನೇ ಕಿತ್ತೂರು ಇನ್ಸ್ಪೆಕ್ಟರ್ಗೆ ಫೋನ್ ಮಾಡಿದ್ದೆ. ಈ ರೀತಿ ಅಪಘಾತವಾಗಿದೆ. ಆಸ್ಪತ್ರೆಗೆ ಹೋಗಬೇಕಿದೆ ಅಂತ ಹೇಳಿದ್ದೆ. ಅಪಘಾತ ವೇಳೆ ಬೇಕು ಅಂತ ಏನೂ ಮಾಡಿಲ್ಲ. ಆ ಅರ್ಜೆಂಟ್ನಲ್ಲಿ ತಲೆಗೆ ಹೊಳೆಯುತ್ತಾ? ಅಪಘಾತದಲ್ಲಿ ಯಾವ ಪೂರ್ವನಿಯೋಜಿತ ಕೃತ್ಯ ಇಲ್ಲ. ಹೆಬ್ಬಾಳ್ಕರ್ 25 ವರ್ಷ ರಾಜಕೀಯ ಜೀವನದಲ್ಲಿ ಇದ್ದಾರೆ. ಅವರು ಹಣ ಸಾಗಾಟ ಮಾಡಿದ್ರು ಅನ್ನೋದು ತಪ್ಪು. ಅದರ ಅಗತ್ಯವೂ ಇಲ್ಲ" ಎಂದು ಪರಿಷತ್ ಸದಸ್ಯರೂ ಆಗಿರುವ ಹಟ್ಟಿಹೊಳಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಂವಿಧಾನ, ಅಂಬೇಡ್ಕರ್ ಬಗ್ಗೆ ಮಾತನಾಡುವುದು ಕಾಂಗ್ರೆಸ್ಗೆ ಚಟ: ಛಲವಾದಿ