ರಾಯಚೂರು:"ಜನಾರ್ದನ ರೆಡ್ಡಿ ಲೂಟಿ ಮಾಡಿ ಜೈಲಿಗೆ ಹೋಗಿ ಬಂದು, ಈಗ ಶಾಸಕರಾಗಿದ್ದಾರೆ. ಅವರನ್ನು ಪಕ್ಷದಿಂದ ಯಾಕೆ ಹೊರ ಹಾಕಿದ್ರು ಎನ್ನುವುದು ಇಡೀ ರಾಜ್ಯ, ರಾಷ್ಟಕ್ಕೆ ಗೊತ್ತು. ಅವರನ್ನು ಪಕ್ಷದಿಂದ ಹೊರಗೆ ಹಾಕಿದ್ದು ಯಾರು? ನಾವಾ?. ಬಿಜೆಪಿಯವರು ಹೊರ ಹಾಕಿದ್ದು. ಈಗ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೀಗೆ ಮಾತನಾಡ್ತಿದ್ದಾರೆ ಅಷ್ಟೇ" ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು, ವಾಗ್ದಾಳಿ ನಡೆಸಿದರು.
ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಿಎಂ ಸಿದ್ದರಾಮಯ್ಯನವರ ಪತ್ನಿ ಮನನೊಂದು ಆತ್ಮಸಾಕ್ಷಿಯಾಗಿ ನಿವೇಶನಗಳನ್ನು ಮರಳಿಸಿದ್ದಾರೆ. ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಗೆ ಹಿಂತಿರುಗಿಸಿದ್ರು ಅಂತ ಕೇಳುತ್ತಾರೆ. ಆರ್.ಅಶೋಕ್ ಅವರನ್ನು ಕೇಳಿದರೆ ನಾನು ಈಗಾಗಲೇ ಹಿಂತಿರುಗಿಸಿದ್ದೇನೆ ಅಂತಾರೆ. ಅವರು ವಿಪಕ್ಷದ ನಾಯಕ. ಇವರು ಕೇಂದ್ರ ಸಚಿವರು. ಇವರಲ್ಲಿ ಯಾವ ರೀತಿಯ ಬದ್ಧತೆಯಿದೆ, ಜವಾಬ್ದಾರಿಯಿದೆ?. ಇವರ ಮಾತುಗಳಿಗೆ ಅರ್ಥ ಇದೆಯೇ? ಹುಚ್ಚರು ಮಾತನಾಡಿದ ಹಾಗೆ ಮಾತನಾಡುತ್ತಿದ್ದಾರೆ. ನಿವೇಶನಗಳನ್ನು ವಾಪಸ್ ಮಾಡಿದ ಮೇಲೆ ಅವರಿಗೆ ಮಾತನಾಡಲು ವಿಷಯವಿಲ್ಲ" ಎಂದರು.