ಬೆಂಗಳೂರು : ನಟ ದರ್ಶನ್ಗೆ ಜೈಲಿನಲ್ಲಿ ಯಾವುದೇ ವಿಶೇಷ ಸತ್ಕಾರ ಕೊಡುತ್ತಿಲ್ಲ, ಎಲ್ಲ ಕೈದಿಗಳಿಗಳಂತೆ ಅವರನ್ನು ನೋಡಿಕೊಳ್ಳಲಾಗ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ದರ್ಶನ್ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕೊಡ್ತಿರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ಅವತ್ತೇ ಹೇಳಿದ್ದೇನೆ ನಾನು. ಬಿರಿಯಾನಿ ಅವೆಲ್ಲ ಏನೂ ಕೊಡ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡ್ತಿಲ್ಲ. ಬೇಕಾದರೆ ಬನ್ನಿ ನನ್ನ ಜತೆ, ಕರೆದುಕೊಂಡು ಹೋಗಿ ತೋರಿಸ್ತೇನೆ ಎಂದರು.
ಹೊಸ ಕಾನೂನಿನಡಿ 66 ಕೇಸು ದಾಖಲು : ಹೊಸ ಮೂರು ಅಪರಾಧ ಕಾನೂನುಗಳಲ್ಲಿ ಕೆಲವು ಗೊಂದಲಗಳಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ರಾಜ್ಯದಲ್ಲಿ ನಿನ್ನೆ ರಾತ್ರಿ (ಜುಲೈ 1)ವರೆಗೂ ಸುಮಾರು 66 ಹೊಸ ಕೇಸ್ಗಳು ದಾಖಲಾಗಿವೆ. ಬೆಂಗಳೂರಿನಲ್ಲೂ 20 ಕೇಸ್ಗಳು ದಾಖಲಾಗಿವೆ. ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ, ಕೆಲವು ಸರಿಯಾಗಿಲ್ಲ. ಹಿಂದೆ ಕೆಲವು ಸಂದರ್ಭಗಳಲ್ಲಿ ಕೇಸ್‌ಗಳನ್ನು ದಾಖಲು ಮಾಡುವಂಥದ್ದಿತ್ತು. ಈಗ ಹೊಸ ಕಾನೂನುಗಳಲ್ಲಿ ಅವುಗಳನ್ನು ದಾಖಲು ಮಾಡುವ ಹಾಗಿಲ್ಲ. ಹೀಗೆ ಕೆಲವು ಗೊಂದಲಗಳಿವೆ. ಅವುಗಳ ಬಗ್ಗೆ ಚರ್ಚೆ ಮಾಡಿ ಕೇಂದ್ರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.
ಈ ಹೊಸ ಕಾನೂನುಗಳು ಇಡೀ ದೇಶಕ್ಕೆ ಸಂಬಂಧಪಟ್ಟಿವೆ. ಲಕ್ಷಾಂತರ ಕೇಸ್ಗಳು ಹೊಸ ಕಾನೂನಿನಡಿ ದಾಖಲಾಗುತ್ತವೆ. ಆದರೆ, ಈ ಹೊಸ ಕಾನೂನುಗಳ ಬಗ್ಗೆ ಚರ್ಚೆ ಆಗಬೇಕಿದೆ. ಕೆಲವು ಉತ್ತಮವಾದ ಅಂಶಗಳಿವೆ, ಎಲ್ಲವನ್ನೂ ತೆಗೆದುಹಾಕಲು ಆಗಲ್ಲ. ಆದರೆ, ಕೆಲವೊಂದು ಅಂಶಗಳಲ್ಲಿ ಕಾನೂನಿನ ಬಳಕೆಗೆ ಅವಕಾಶ ಸರಿಯಿಲ್ಲ. ಈಗಲೇ ಅವುಗಳ ಬಗ್ಗೆ ಹೇಳಲು ಹೋಗಲ್ಲ ನಾನು. ಕೆಲವು ಕೇಸ್ಗಳಲ್ಲಿ ದೂರು ದಾಖಲು ಮಾಡುವ ಅವಕಾಶ ಇಲ್ಲ. ಅಂಥದ್ದರ ಬಗ್ಗೆ ಚರ್ಚಿಸಿ ಕೇಂದ್ರದ ಗಮನಕ್ಕೆ ತರುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ಸಿಎಂ, ಡಿಸಿಎಂ ಕುರಿತು ಚರ್ಚೆ ಮಾಡುವವರಿಗೆ ಡಿಕೆಶಿ ವಾರ್ನಿಂಗ್ ವಿಚಾರವಾಗಿ ಮಾತನಾಡಿ, ಅದು ಕೆಪಿಸಿಸಿ ಅಧ್ಯಕ್ಷರಿಗೆ ಸಂಬಂಧಿಸಿದ ವಿಚಾರ. ನೋಟಿಸ್ ಕೊಡೋದು ಅಧ್ಯಕ್ಷರು ಮಾಡುವ ಕೆಲಸ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿ ಅಂತ ಅಧ್ಯಕ್ಷರು ಯಾರಿಗೆ ಆದರೂ ಹೇಳಬೇಕಾಗುತ್ತದೆ. ಈಗಲೂ ಅದೇ ರೀತಿ ಅಧ್ಯಕ್ಷರು ಹೇಳಿದ್ದಾರೆ ಅನ್ನಿಸುತ್ತೆ. ಅಧ್ಯಕ್ಷರು ಏನೇ ತೀರ್ಮಾನ ತಗೊಂಡ್ರೂ, ಏನೇ ಹೇಳಿದರೂ ಕೇಳ್ತೇವೆ. ಯಾರಿಂದ ಯಾವ ಶಿಸ್ತು ಉಲ್ಲಂಘನೆ ಆಗಿದೆ ಅಂತ ಆ ವ್ಯಕ್ತಿಯನ್ನು ಕರೆದು ಸ್ಪಷ್ಟವಾಗಿ ಹೇಳಬೇಕು. ಆನಂತರ ಮುಂದಿನ ಬೆಳವಣಿಗೆ ಅಧ್ಯಕ್ಷರಿಗೆ ಬಿಟ್ಟಿದ್ದು ಎಂದರು.