ಚಿಕ್ಕಮಗಳೂರು ಡಿಸಿ ಮಾಹಿತಿ (ETV Bharat) ಚಿಕ್ಕಮಗಳೂರು:ಮಲೆನಾಡಿನಲ್ಲಿ ವಾಡಿಕೆಯಂತೆ ಜನವರಿಯಿಂದ ಜೂನ್ವರೆಗೆ 817 ಮಿ.ಮೀ ಮಳೆಯಾಗಬೇಕು. ಆದರೆ 1,096 ಮಿ.ಮೀ ಮಳೆ ಸುರಿದಿದ್ದು, ಇದು ಶೇ 76 ರಷ್ಟು ಹೆಚ್ಚು. ಕಳೆದ ಒಂದೇ ವಾರದಲ್ಲಿ 120 ಮಿ.ಮೀ ಮಳೆ ಆಗಬೇಕಿದ್ದು, 320 ಮಿ.ಮೀ ಮಳೆ ಬಿದ್ದಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗಾರಾಜ್ ಮಾಹಿತಿ ನೀಡಿದರು.
ಈ ವರ್ಷದ ಮಹಾಮಳೆಗೆ 193 ಮನೆಗಳು ಧರಾಶಾಹಿಯಾಗಿವೆ. 77 ಮನೆಗಳಿಗೆ ಜಿಲ್ಲಾಡಳಿತ ಪರಿಹಾರ ನೀಡಿದೆ. 44 ಮನೆಗಳಿಗೆ ದಾಖಲೆ ಇಲ್ಲ ಎಂದು ಸರ್ಕಾರಕ್ಕೆ ವರದಿ ನೀಡಲಾಗಿದೆ. 1,800 ವಿದ್ಯುತ್ ಕಂಬಗಳು, 48 ಸೇತುವೆಗಳು ಹಾನಿಗೀಡಾಗಿವೆ. 90 ಎಕರೆ ತೋಟದ ಬೆಳೆ ನಾಶವಾಗಿದೆ. 10 ಕಿ.ಮೀ ರಸ್ತೆ ಹಾನಿಗೊಂಡಿದೆ.
ಮುಳ್ಳಯ್ಯನಗಿರಿಯಲ್ಲಿ ಹಲವೆಡೆ ಭೂಕುಸಿತ ಉಂಟಾಗಿದ್ದು ಒಂದು ವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಲೋಕೋಪಯೋಗಿ ಇಲಾಖೆಯ ಮನವಿಯಂತೆ ಇನ್ನೊಂದು ವಾರ ಜಿಲ್ಲಾಡಳಿತ ನಿರ್ಬಂಧ ಹೇರಲಿದೆ ಎಂದು ಹೇಳಿದರು.
ಮಳೆ ಹಾನಿ ಪ್ರದೇಶ ಪರಿಶೀಲಿಸಿದ ಕೆ.ಜೆ.ಜಾರ್ಜ್: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಇದೇ ವೇಳೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಸಂತ್ರಸ್ತರ ಅಹವಾಲು ಆಲಿಸಿದರು. ಬಳಿಕ ಸಾಂತ್ವನ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ಸಂತ್ರಸ್ತರಿಂದ ಮಾಹಿತಿ ಪಡೆದರು. ಸೂಕ್ತ ಮೂಲ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೂಡಿಗರೆ ತಾಲೂಕಿನ ಕುನ್ನಹಳ್ಳಿಯಿಂದ ಮಳೆ ಹಾನಿ ವೀಕ್ಷಣೆ ಆರಂಭಿಸಿದ ಸಚಿವ ಜಾರ್ಜ್, ಸಂಜೆವರೆಗೂ ಮೂರು ತಾಲೂಕುಗಳ 10 ಪ್ರದೇಶಗಳಿಗೆ ಭೇಟಿ ನೀಡಿದರು. ತಕ್ಷಣದ ಪರಿಹಾರವಾಗಿ 1.20 ಲಕ್ಷ ರೂ. ನೀಡುವುದರ ಜೊತೆಗೆ ಇನ್ನೂ 3.80 ಲಕ್ಷ ರೂ. ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಗುಡ್ಡ ಕುಸಿತ ಸಂಭವಿಸಿದ ಅರೇನೂರು, ಹುತ್ತಿನಗದ್ದೆ, ಬಸರೀಕಟ್ಟೆ, ಆನೆಗುಂಡ ಮುಂತಾದ ಪ್ರದೇಶಗಳಿಗೆ ತೆರಳಿದ ಸಚಿವರು, ಪರಿಸ್ಥಿತಿ ಅವಲೋಕಿಸಿದರು. ಜಯಪುರ-ಕೊಪ್ಪ ರಸ್ತೆಯಲ್ಲಿ ಕುಸಿದ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದ ಕುಸಿದು ಬಿದ್ದಿರುವ ಮೂಡಿಗೆರೆ ತಾಲೂಕಿನ ಚಂಡುಗೋಡು, ಆವಳ್ಳಿ ಶಾಲಾ ಕಟ್ಟಡಗಳನ್ನು ವೀಕ್ಷಿಸಿ, ಕುಸಿದು ಬಿದ್ದಿರುವ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಹೊಸ ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೂಡಲೇ ಅಂದಾಜು ಪಟ್ಟಿ ಸಿದ್ದಪಡಿಸಿ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದಾಗ ಪ್ರತಿಕ್ರಿಯಿಸಿದ ಸಚಿವರು, ಶೀಘ್ರ ಕೆಲಸ ಆರಂಭಿಸುವಂತೆ ತಾಕೀತು ಮಾಡಿದರು. ಸಚಿವರ ಭೇಟಿ ವೇಳೆ ಸ್ಥಳೀಯರು ಜನ್ನಾಪುರ ವ್ಯಾಪ್ತಿಯಲ್ಲಿ 20 ದಿನಗಳಿಂದ ವಿದ್ಯುತ್ ಸಮಸ್ಯೆಯನ್ನು ಹೇಳಿದ್ದು, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮಾವತಿ ಮಧ್ಯಪ್ರವೇಶಿಸಿ, ಅಲ್ಲಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಎರಡು ದಿನಗಳಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದರು. ಕೂಡಲೇ ಕಾರ್ಯ ಪ್ರವೃತ್ತವಾಗುವಂತೆ ಸಚಿವರು ನಿರ್ದೇಶನ ನೀಡಿದರು.
ಕೊಪ್ಪ ತಾಲೂಕಿನ ಬಸರೀಕಟ್ಟೆ ಪಶು ಆಸ್ಪತ್ರೆ ಹಿಂಭಾಗ ಗುಡ್ಡ ಕುಸಿತವಾಗಿ ಅಪಾಯಕಾರಿ ಸ್ಥಿತಿ ಉದ್ಭವವಾಗಿರುವ ಪ್ರದೇಶ ಪರಿಶೀಲಿಸಿದ ಸಚಿವರು, ಸಂಬಂಧಿಸಿದ ಇಲಾಖೆಗಳ ಸಮನ್ವಯದೊಂದಿಗೆ ಸಮಸ್ಯೆ ಬಗೆಹರಿಸಲು ತಿಳಿಸಿದರು. ಪ್ರಮುಖವಾಗಿ ಜಿಲ್ಲೆಯ ವಿವಿಧ ಭಾಗಗಳಾದ ಕುನ್ನಹಳ್ಳಿ, ಹಾವಳ್ಳಿ, ಆಲ್ದೂರು, ಅರೇನೂರು, ಹುತ್ತಿನಗದ್ದೆ, ಬಸರೀಕಟ್ಟೆ, ನಾರ್ವೆ (ಜಯಪುರ-ಕೊಪ್ಪ ರಸ್ತೆ) ಆನೆಗುಂಡ, ನೆಮ್ಮಾರು, ಬಸಾಪುರ, ಪ್ರದೇಶಕ್ಕೆ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಸಚಿವ ಜಾರ್ಜ್ ಸ್ಥಳೀಯರಿಗೆ ಭರವಸೆ ನೀಡಿದರು.
ಇದನ್ನೂ ಓದಿ:ತುಂಗಭದ್ರಾ ಜಲಾಶಯದ ರಮಣೀಯ ನೋಟ ಡ್ರೋನ್ ಕ್ಯಾಮೆರಾದಲ್ಲಿ ಸೆರೆ: ನೋಡಿ - Tungabhadra Dam