ವಿದ್ಯಾರ್ಥಿನಿ ವಿಜಯಲಕ್ಷ್ಮಿ ಕೊಟ್ರೆಪ್ಪ ಗುಲಗಂಜಿ ಬೆಳಗಾವಿ: ತಂದೆ-ತಾಯಿ ಕೂಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೀಗಿದ್ದರೂ ಸತತ ಪರಿಶ್ರಮದಿಂದ ಓದಿದ ಸವದತ್ತಿಯ ಕುಮಾರೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಕೊಟ್ರೆಪ್ಪ ಗುಲಗಂಜಿ ಪಿಯು ಪರೀಕ್ಷೆಯಲ್ಲಿ 600 ಅಂಕಗಳಿಗೆ 592 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಗಳಿಸಿದ್ದಾರೆ. ಇವರು ಕನ್ನಡ-100, ಹಿಂದಿ-96, ಇತಿಹಾಸ-98, ಭೂಗೋಳಶಾಸ್ತ್ರ-100, ರಾಜ್ಯಶಾಸ್ತ್ರ-98, ಶಿಕ್ಷಣಶಾಸ್ತ್ರ-100 ಅಂಕ ಪಡೆದಿದ್ದಾರೆ.
ಕುಟುಂಬಸ್ಥರು ಹಾಗೂ ಉಪನ್ಯಾಸಕರು ವಿದ್ಯಾರ್ಥಿನಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯನ್ನು ಕಾಲೇಜು ಆಡಳಿತ ಮಂಡಳಿ ಸನ್ಮಾನಿಸಿತು.
ಐಎಎಸ್ ಮಾಡುವ ಗುರಿ: ಈ ಬಗ್ಗೆ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಮಾತನಾಡಿ, ''ನನ್ನ ಸಾಧನೆಗೆ ಉಪನ್ಯಾಸಕರು, ತಂದೆ-ತಾಯಿ, ಅಣ್ಣ, ಮಾವ ಮತ್ತು ಕುಟುಂಬಸ್ಥರ ಪ್ರೋತ್ಸಾಹ ಕಾರಣ. ಉಪನ್ಯಾಸಕರು ಕಲಿಸಿದ ಪಾಠವನ್ನು ಮನೆಗೆ ಬಂದು ಓದಿ, ಹತ್ತು ಬಾರಿ ಬರೆಯುತ್ತಿದ್ದೆ. ದಿನಕ್ಕೆ ಆರು ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದೆ. ಮುಂದೆ ಐಎಎಸ್ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಪ್ರಾಮಾಣಿಕ ಅಧಿಕಾರಿಯಾಗಿ ಜನರ ಸೇವೆ ಮಾಡುತ್ತೇನೆ'' ಎಂದರು.
ಇದನ್ನೂ ಓದಿ:'ನಿರಂತರ ಕಠಿಣ ಪರಿಶ್ರಮವೇ ಸಾಧನೆಗೆ ಕಾರಣ': ಪಿಯು ವಿಜ್ಞಾನದಲ್ಲಿ ಫಸ್ಟ್ ರ‍್ಯಾಂಕ್ ಪಡೆದ ವಿದ್ಯಾಲಕ್ಷ್ಮಿ ಮಾತು - PUC Topper Vidyalakshmi