ಬೆಂಗಳೂರು:ಉಪ ಚುನಾವಣೆ ನಡೆಯಲಿರುವ 3 ಕ್ಷೇತ್ರಗಳ ಪೈಕಿ ಬಿಜೆಪಿ ಈಗಾಗಲೇ 2 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷಗಳಲ್ಲಿ ಸಹಮತ ವ್ಯಕ್ತವಾಗಿಲ್ಲ. ಹೀಗಾಗಿ, ಇಂದು(ಭಾನುವಾರ) ಮತ್ತೊಂದು ಸುತ್ತಿನ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಜೆಡಿಎಸ್‌ಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ. ಖಾಸಗಿ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ಉಭಯ ಪಕ್ಷಗಳ ಮುಖಂಡರ ಸಭೆ ನಡೆಯಿತು. ಈ ಸಭೆಯಲ್ಲಿ ಕೇಂದ್ರ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ ಮತ್ತು ಬಿಜೆಪಿ ವತಿಯಿಂದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಿದ್ದರು.
ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಸಾಧಕ-ಬಾಧಕಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಶುಕ್ರವಾರ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಜೊತೆ ಜೆಡಿಎಸ್ ಮುಖಂಡರು ಸಭೆ ನಡೆಸಿ ಮನವೊಲಿಕೆ ಪ್ರಯತ್ನ ನಡೆಸಿದ್ದರು. ಆದರೆ ಫಲಪ್ರದವಾಗಲಿಲ್ಲ. ಈ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು ಎಂದು ತಿಳಿದು ಬಂದಿದೆ.
ಸಂಡೂರು ಮತ್ತು ಶಿಗ್ಗಾವಿ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಯುತ್ತಿರುವುದರಿಂದ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಬಿಜೆಪಿ ಮುಖಂಡರು ಸಹ ಜೆಡಿಎಸ್ ನೀಡಲು ಒಲವು ತೋರಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಲಭಿಸುವುದು ಬಹುತೇಕ ಖಚಿತ. ಆದರೂ ಚನ್ನಪಟ್ಟಣ ಕ್ಷೇತ್ರದ ಆಕಾಂಕ್ಷಿಯಾಗಿರುವ ಸಿ.ಪಿ.ಯೋಗೇಶ್ವರ್ ತಮ್ಮ ಪಟ್ಟುಬಿಡದ ಕಾರಣ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಸಹಮತ ವ್ಯಕ್ತಪಡಿಸದ ಹೆಚ್ಡಿಕೆ?:ಸಭೆಯಲ್ಲಿ ಅಶೋಕ್ ಮತ್ತು ವಿಜಯೇಂದ್ರ ಅವರು ಸಿ.ಪಿ.ಯೋಗೇಶ್ವರ್‌ಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪ ಮಾಡಿದರು. ಕ್ಷೇತ್ರದ ವರದಿಗಳ ಪ್ರಕಾರ ಯೋಗೇಶ್ವರ್ ಪರ ಇರುವುದಾಗಿ ಎಂಬ ಮಾಹಿತಿ ನೀಡಿದರು. ಆದರೆ, ಇದಕ್ಕೆ ಸಹಮತ ವ್ಯಕ್ತಪಡಿಸದ ಹೆಚ್.ಡಿ.ಕುಮಾರಸ್ವಾಮಿ, ಚನ್ನಪಟ್ಟಣ ಕ್ಷೇತ್ರವು ಜೆಡಿಎಸ್ ಭದ್ರಕೋಟೆಯಾಗಿದೆ. ಪಕ್ಷದವರೇ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎನ್ನಲಾಗಿದೆ.