ಕರ್ನಾಟಕ

karnataka

ETV Bharat / state

ನಾನು ಬಸವಾದಿ ಶರಣರ ಅನುಯಾಯಿ: ಸಿಎಂ ಸಿದ್ದರಾಮಯ್ಯ - ಬಸವಾದಿ ಶರಣರ ಅನುಯಾಯಿ

ಬಿಜೆಪಿಯವರ ಸುಳ್ಳುಗಳನ್ನು ನಂಬಿ ಮೋಸ ಹೋಗಬೇಡಿ. ನಾವು ಬಸವಾದಿ ಶರಣರ ಮಾರ್ಗದಲ್ಲಿ ಹಿಂದೆಯೂ ನುಡಿದಂತೆ ನಡೆದಿದ್ದೇವೆ. ಈಗಲೂ ನಡೆಯುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Feb 3, 2024, 7:21 AM IST

ವಿಜಯಪುರ: ಮೌಢ್ಯ, ಕಂದಾಚಾರ, ಜಾತಿ ತಾರತಮ್ಯದ ವಿರುದ್ಧ ವಚನ ಕ್ರಾಂತಿ ಆರಂಭಿಸಿದ್ದರಿಂದ ನಾನು ಬಸವಾದಿ ಶರಣರ ಅನುಯಾಯಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುದ್ದೇಬಿಹಾಳ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಸರ್ಕಾರದ ಐದು ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ದುಡಿಯುವವರು ಯಾರೋ, ದುಡಿದು ತಿನ್ನುವವರು ಇನ್ಯಾರೋ ಎನ್ನುವ ಪರಿಸ್ಥಿತಿ ಸಮಾಜದಲ್ಲಿತ್ತು. ಈ ತಾರತಮ್ಯ ಮತ್ತು ಮೇಲು - ಕೀಳು ಹೋಗಲಾಡಿಸಲು ಬಸವಣ್ಣರ ನೇತೃತ್ವದಲ್ಲಿ ವಚನ ಕ್ರಾಂತಿ ಶುರು ಆಯಿತು. ಈ ಕಾರಣಕ್ಕೆ ನಾನು ಬಸವಾದಿ ಶರಣರ ಅನುಯಾಯಿ. ಇವರು ಕರ್ಮ ಸಿದ್ಧಾಂತವನ್ನು ಸಂಪೂರ್ಣ ತಿರಸ್ಕರಿಸಿತು ಎಂದು ವಿವರಿಸಿದರು. ಆದರೆ, ಕ್ರಾಂತಿಯ ಪ್ರಭಾವದಲ್ಲಿ ಸಮಾಜ ಪೂರ್ಣ ಬದಲಾಗುವ ಮೊದಲೇ ವಚನ ಕ್ರಾಂತಿಗೆ ಅಡ್ಡಗಾಲು ಹಾಕಿದರು. ಆದ್ದರಿಂದ ಇನ್ನೂ ಬಸವಣ್ಣನವರ ಆಶಯದ "ಇವ ನಮ್ಮವ ಇವ ನಮ್ಮವ" ಎನ್ನುವ ಆಶಯ ಈಡೇರದೆ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾಡಿನ ಜನರನ್ನು ತಪ್ಪು ದಾರಿಗೆ ಎಳೆದು ಅವರನ್ನು ವಂಚಿಸಲು ಬಿಜೆಪಿ ಅಪ್ಪಟ ಸುಳ್ಳುಗಳನ್ನು ಉತ್ಪಾದಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳುಗಳನ್ನು ಉತ್ಪಾದಿಸುತ್ತಾ ಅಲೆಯುತ್ತಿದ್ದಾರೆ. ಹಣ ಇಲ್ಲದೆ ಗ್ಯಾರಂಟಿ ಯೋಜನೆಗಳು, ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಒಂದೇ ದಿನ 227 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಿದ್ದೇವೆ. ಮಾರ್ಚ್ 20 ರಂದು ನಾನು ಮುದ್ಸೇಬಿಹಾಳ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಅವತ್ತು ನಾನು ಮುದ್ದೇಬಿಹಾಳದಲ್ಲಿ ಕೊಟ್ಟ ಮಾತಿನಂತೆ ಎಲ್ಲ ಗ್ಯಾರಂಟಿಗಳನ್ನೂ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ನಾವೂ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದು ವಿವರಿಸಿದರು.

ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣ: ಶರಣ ಶ್ರೇಷ್ಠ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 12 ಮಂದಿ ಶರಣ ಸ್ವಾಮೀಜಿಗಳು ವೇದಿಕೆಯಲ್ಲೇ ಅಭಿನಂದಿಸಿ, ಸನ್ಮಾನಿಸಿದರು.

ಕ್ಷೇತ್ರದ ಶಾಸಕರಾದ ಅಪ್ಪಾಜಿ ಸಿ.ಎಸ್.ನಾಡಗೌಡ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಕೃಷಿ ಸಚಿವರಾದ ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಶಾಸಕರಾದ ಯಶವಂತರಾಯಗೌಡ ವ್ಹಿ ಪಾಟೀಲ್, ಹಣಮಂತ ನಿರಾಣಿ, ಬಸವನಗೌಡ ಆರ್ ಪಾಟೀಲ್, ಸುನಿಲಗೌಡ ಬಿ ಪಾಟೀಲ, ಪೊ.ಹೆಚ್.ಪೂಜಾರ, ವಿಠ್ಠಲ ಧೋಂಡಿಬಾ ಕಟಕದೊಂಡ, ಅಶೋಕ ಮಲ್ಲಪ್ಪ ಮನಗೂಳಿ, ಭೀಮನಗೌಡ ಪಾಟೀಲ, KPCC ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಲ್ ಸೇರಿ ಹಲವು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಪರೇಷನ್ ಬಿಟ್ಟರೆ ಬಿಜೆಪಿಯವರಿಗೆ ಬೇರೇನೂ ಗೊತ್ತಿಲ್ಲ: ಸಿದ್ದರಾಮಯ್ಯ -ಇದಕ್ಕೂ ಮುದ್ದೇಬಿಹಾಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಜನರ ವಿಶ್ವಾಸ, ನಂಬಿಕೆ ಗಳಿಸುವಲ್ಲಿ ವಿಫಲವಾದ ಬಿಜೆಪಿಗೆ ಆಪರೇಷನ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಹಣಕೊಟ್ಟು ಶಾಸಕರನ್ನು ಕೊಂಡುಕೊಂಡು ಬಹುಮತ ಮಾಡಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ಸಿನ ಕೆಲ ನಾಯಕರ ದುಂಬಾಲು ಬಿದ್ದಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಹಿಂದೆಯೂ ಎರಡು ಬಾರಿ ಹಾಗೇ ಮಾಡಿದ್ದಾರೆ. 2008 ರಿಂದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇದ್ದಾಗಲೂ ಇದನ್ನೇ ಮಾಡಿದ್ದು. ಎಲ್ಲ ಕಡೆ ಕೊಂಡುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಕೊಂಡುಕೊಳ್ಳಲು ಜನ ಸಿಕ್ಕರೆ ಸರ್ಕಾರ ರಚನೆ ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ಜನರು ಬಿಜೆಪಿಗೆ ಜನ ಪೂರ್ಣ ಅಧಿಕಾರ ಕೊಟ್ಟೇ ಇಲ್ಲ. 2008, 2013, 2018 ರಲ್ಲಿ ಅವರು ಬಹುಮತದಿಂದ ಗೆದ್ದೇ ಇಲ್ಲ. ಕಾಂಗ್ರೆಸ್ ಪಕ್ಷ 2013ರಲ್ಲಿ ಗೆದ್ದಿದೆ. 2018 ರಲ್ಲಿ ಸೋತು ಪುನ: 2023 ರಲ್ಲಿ 136 ಸ್ಥಾನಗಳನ್ನು ಪಡೆದು ಗೆದ್ದಿದ್ದೇವೆ. ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಹಾಗೂ ತೀರ್ಪಿನಂತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬರುತ್ತಾರೆ ಎಂದರು.

ಮಂಡ್ಯದಲ್ಲಿ ಹನುಮಧ್ವಜ ಪ್ರಕರಣಕ್ಕೆ ವಾಸ್ತವಾಂಶವೇ ಬಿಜೆಪಿಯವರಿಗೆ ತಿಳಿದಿಲ್ಲ. ಅಲ್ಲಿ ಕೇವಲ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಾರಿಸುವುದಾಗಿ ಕೆರಗೋಡು ಗ್ರಾಮಪಂಚಾಯ್ತಿಯಲ್ಲಿ ಅನುಮತಿ ಪಡೆದುಕೊಂಡು ಕೇಸರಿ ಧ್ವಜ ಹಾರಿಸಲು ಮುಂದಾಗಿದ್ದರು. ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಯಾವುದೇ ಗೌರವವಿಲ್ಲ. ರಾಷ್ಟ್ರಧ್ವಜ, ಭಾರತ ದೇಶದ 140 ಕೋಟಿ ಜನರ ಅಸ್ಮಿತೆಯ ಪ್ರತೀಕ. ಇಂತಹ ರಾಷ್ಟ್ರಧ್ವಜವನ್ನು ಹಾಕಲು ಒಪ್ಪದಿರುವವರು ದೇಶಭಕ್ತರೆಂದು ಹೇಳಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ 1.17 ಕೋಟಿ ಮಹಿಳೆಯರಿಗೆ ಡಿಬಿಟಿ ಮೂಲಕ ಗೃಹ ಲಕ್ಷ್ಮೀ ಯೊಜನೆಯಡಿ ಹಣ ವರ್ಗಾವಣೆಯಾಗುತ್ತಿದೆ. ವಿಜಯಪುರ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿ ಹೆಚ್ಚು ನೋಂದಣಿಯಾಗಿದೆ ಎಂದರು.

ಇದನ್ನೂ ಓದಿ: ನಗಾರಿ ಬಾರಿಸುವ ಮೂಲಕ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details