ಕರ್ನಾಟಕ

karnataka

ETV Bharat / state

4 ತಿಂಗಳು ಹಿಂದಿನ ಹಿಟ್​ ಆ್ಯಂಡ್​ ರನ್ ಕೇಸ್: ವಾಹನ ಮೇಲಿನ ಹಸು ಚಿತ್ರ ಆಧರಿಸಿ ಆರೋಪಿಗಳ ಬಂಧನ - BENGALURU HIT AND RUN CASE - BENGALURU HIT AND RUN CASE

ನಾಲ್ಕು ತಿಂಗಳು ಹಿಂದೆ ಅಪಘಾತ ಎಸಗಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಹಿಟ್​ ಆ್ಯಂಡ್​ ರನ್ ಕೇಸ್
ಹಿಟ್​ ಆ್ಯಂಡ್​ ರನ್ ಕೇಸ್ (ETV Bharat)

By ETV Bharat Karnataka Team

Published : May 27, 2024, 2:00 PM IST

ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳಗಾಳ ಬ್ರಿಡ್ಜ್ ಬಳಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಹಿಟ್ ಆ್ಯಂಡ್​ ರನ್ ಪ್ರಕರಣದ ಮೂವರು ಆರೋಪಿಗಳನ್ನು ಸಿನಿಮಿಯ ಶೈಲಿಯಲ್ಲಿ ಬಂಧಿಸಲಾಗಿದೆ.

ಕಳೆದ ಜ.14ರಂದು ಮಾಳಗಾಳ ಬ್ರಿಡ್ಜ್ ಬಳಿ ಅಪಘಾತದಲ್ಲಿ ನೇಪಾಳ ಮೂಲದ ದಿನೇಶ್ ಎಂಬಾತ ಸಾವನ್ನಪ್ಪಿದ್ದ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದರು.

ಟ್ರಾಫಿಕ್ ಇನ್​ಸ್ಪೆಕ್ಟರ್ ಎಸ್.ಟಿ. ಯೊಗೇಶ್ ನೇತೃತ್ವದ ತಂಡ ಅಪಘಾತ ಎಸಗಿದ್ದ ವಾಹನದ ಮೇಲಿದ್ದ ಹಸುವಿನ ಚಿತ್ರದ ಸುಳಿವು ಆಧರಿಸಿ ವಾಹನವನ್ನು ಪತ್ತೆ ಹಚ್ಚಿದ್ದಾರೆ. ಅಪಘಾತ ಎಸಗಿ ತಲೆಮರೆಸಿಕೊಂಡಿದ್ದ ಚಾಲಕ ಸುನೀಲ್, ವಾಹನದ ಮಾಲೀಕ ಸಂದೀಪ್ ಹಾಗೂ ಮೃತನ ಸ್ನೇಹಿತ ಟಿಕ್ ರಾಜ್ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ ಹದ್ದಣ್ಣನವರ್ ತಿಳಿಸಿದ್ದಾರೆ.

ಏನಿದು ಘಟನೆ:ಡಿಸಿಪಿ ಪ್ರಕಾರ, ನೇಪಾಳ ಮೂಲದ ಮೃತ ದಿನೇಶ್‌ ಸ್ನೇಹಿತ ಟಿಕ್ ರಾಜ್ ಎಂಬುವರು ನಗರದಲ್ಲಿ ಕೆಲ ವರ್ಷಗಳಿಂದ ವಾಸವಾಗಿದ್ದು ಜ.14ರ ನಸುಕಿನ 2 ಗಂಟೆ ಸುಮಾರಿಗೆ ಹೆಬ್ಬಾಳದಲ್ಲಿರುವ ಸ್ನೇಹಿತನ ಮನೆಗೆ ಇಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಮದ್ಯದ ‌ನಶೆಯಲ್ಲಿದ್ದ ಸವಾರ ಟಿಕ್ ರಾಜ್, ಅಜಾಗರೂಕತೆಯಿಂದ ಗಾಡಿ ಚಲಾಯಿಸಿ ಮಾಳಗಾಳ ಬ್ರಿಡ್ಜ್ ಬಳಿ ನಿಯಂತ್ರಣ ತಪ್ಪಿ ಬಿದ್ದು ಇಬ್ಬರು ಗಾಯಗೊಂಡಿದ್ದರು.

ಘಟನೆಯಲ್ಲಿ‌ ಸ್ನೇಹಿತ ದಿನೇಶ್​ಗೆ ಹೆಚ್ಚು ಗಾಯವಾಗಿರುವುದನ್ನು ಕಂಡು ದಿಗ್ಭ್ರಮೆಗೊಂಡ ಟಿಕ್​​ ರಾಜ್​ ಬ್ರಿಡ್ಜ್ ಮೇಲಿಂದ ಹಾರಿ ಗಂಭೀರವಾಗಿ ಗಾಯಗೊಂಡಿದ್ದ. ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಟಿಕ್ ರಾಜ್​ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದಾಗ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವುದು ಬೆಳಕಿಗೆ ಬಂದಿತ್ತು.

ಇನ್ನೊಂದೆಡೆ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದಿನೇಶ್ ಮೇಲೆ ಮತ್ತೊಂದು ವಾಹನ ಹರಿದು ಸಾವನ್ನಪ್ಪಿರುವುದು ಗೊತ್ತಾಗಿತ್ತು. ಕೃತ್ಯ ನಡೆದ ಸ್ಥಳಕ್ಕೆ ಎಫ್​ಎಸ್ಎಲ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮೃತನ ರಕ್ತದ ಮಾದರಿಯನ್ನ ಸಂಗ್ರಹಿಸಿದ್ದರು‌. ಆರಂಭದಲ್ಲಿ ಘಟನೆಗೆ ನಿಖರ ಕುರುಹುಗಳು ಪತ್ತೆಯಾಗಿರಲಿಲ್ಲ‌.

ಬಳಿಕ ಸಿಸಿಟಿವಿ ದೃಶ್ಯ ಆಧರಿಸಿ ಪರಿಶೀಲಿಸಿದಾಗ ಅದೇ ರಸ್ತೆಯಲ್ಲಿ ಓಡಾಟ ನಡೆಸಿದ್ದ ಈಚರ್ ಗಾಡಿ ಮೇಲೆ‌ ಅನುಮಾನ ಮೂಡಿತ್ತು. ಈ ವಾಹನದ ‌ಮೇಲೆ ಹಸುವಿನ ಚಿತ್ರ ಇರುವ ಸುಳಿವು ಆಧರಿಸಿ ಮೈಸೂರು ಟೋಲ್‌ ಬಳಿ ವಾಹನ ನೋಂದಣಿ ಸಂಖ್ಯೆ ಪತ್ತೆ ಹಚ್ಚಿ ಪರಿಶೀಲಿಸಿದಾಗ ಮಂಡ್ಯದ ತೂಬನಕೆರೆಯಲ್ಲಿರುವ ಪಂಚಮುಖಿ ಪೀಡ್ಸ್ ಕಂಪೆನಿಗೆ ಸೇರಿದ ವಾಹನವೆಂದು ತಿಳಿದು ಬಂದಿತು.‌ ನಿರಂತರ ಹುಡುಕಾಟ ಬಳಿಕ ವಾಹನ ಪತ್ತೆ ಹಚ್ಚಿ ಸ್ಥಳಕ್ಕೆ ಭೇಟಿ ಮಾಡಿದ ಪೊಲೀಸರು ಅದರ ಚಕ್ರಗಳಲ್ಲಿ ರಕ್ತದ ಕಲೆಗಳು ಇರುವ ಬಗ್ಗೆ ಖಚಿತಪಡಿಸಿಕೊಳ್ಳಲು ಎಫ್ಎಸ್​ಎಲ್ ಅಧಿಕಾರಿಗಳನ್ನ ಕರೆಯಿಸಿಕೊಂಡು ಲೂಮಿನಾರ್ ಪರೀಕ್ಷೆ ಮಾಡಿಸಿದ್ದರು.

ವಾಹನದ ಎಡಭಾಗದ ಹಿಂಭಾಗದ ಚಕ್ರದಲ್ಲಿ ರಕ್ತದ ಕಲೆಗಳು ಹಾಗೂ ಮಾಂಸದ ತುಂಡುಗಳು ಇರುವುದು ದೃಢವಾಗಿತ್ತು. ನಂತರ ಈ ರಕ್ತದ ಕಲೆಗಳನ್ನ ಪರೀಕ್ಷಿಸಿದಾಗ ಮೃತ ದಿನೇಶ್ ರಕ್ತದ ಮಾದರಿ ಒಂದೆಯಾಗಿತ್ತು. ವೈಜ್ಞಾನಿಕ ಸಾಕ್ಷ್ಯಾಧಾರ ಆಧರಿಸಿ ತಲೆಮರೆಸಿಕೊಂಡಿದ್ದ ಚಾಲಕ ಸುನೀಲ್ ಹಾಗೂ ವಾಹನದ ಮಾಲೀಕ ಸಂದೀಪ್ ಹಾಗೂ ಮದ್ಯಪಾ‌ನ ಮಾಡಿ ಗಾಡಿ ಓಡಿಸಿದ್ದ ಟಿಕ್ ರಾಜ್​​ನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ 24 ಗಂಟೆಗಳಲ್ಲಿ 51 ಸಾವು: ಸುರಕ್ಷಿತ ವಾಹನ ಚಾಲನೆಗೆ ಎಡಿಜಿಪಿ ಅಲೋಕ್ ಕುಮಾರ್ ಸಲಹೆ - ADGP Alok Kumar

ABOUT THE AUTHOR

...view details