ಬೆಳಗಾವಿ: "ಯಪ್ಪಾ ಗಾಂಧಿ ಅಜ್ಜನ ಆಶೀರ್ವಾದದಿಂದ ಒಂದು ತುತ್ತು ಅನ್ನಾ ಉನ್ನಾತೇವು. ಅವರ ತತ್ವ ಬಿಡಬಾರದು ಅಂತಾ ನಾನು ನೂಲುವುದು ಬಿಟ್ಟಿಲ್ಲ. ಅದ ನಮಗ ಉಸಿರ ಮತ್ತು ಆಸರ ಆಗೈತಿ. ಆದರೆ, ನಮ್ಮ ಕಡೆ ಸರ್ಕಾರ ಗಮನ ಕೊಟ್ಟು ಪೆನ್ಷನ್ ಶುರು ಮಾಡಿದರ ಬಹಳ ಉಪಕಾರ ಆಗ್ತೈತಿ." ಬೆಳಗಾವಿ ಸರ್ದಾರ್ಸ್ ಮೈದಾನದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನಿಮಿತ್ತ ಆಯೋಜಿಸಿರುವ ಸರಸ್ ಮೇಳ, ಖಾದಿ ಉತ್ಸವ ಮತ್ತು ಮಾರಾಟ ಮೇಳದಲ್ಲಿ ಚರಕದಲ್ಲಿ ನೂಲುತ್ತಿದ್ದ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಅಜ್ಜಿ ಸುವರ್ಣಾ ಚಿನಗುಡಿ ಅವರ ಮನದಾಳದ ಮಾತಿದು.
ಮಾರಾಟ ಮೇಳದ ಬೃಹತ್ ವೇದಿಕೆಯ ಮುಂಭಾಗದಲ್ಲಿ ನೂಲುತ್ತಿರುವ ಅಜ್ಜಿ ಈಗ ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಪ್ರತಿಯೊಬ್ಬರೂ ಬಂದು ಅಜ್ಜಿ ನೂಲುವುದನ್ನು ಕುತೂಹಲದಿಂದ ನೋಡುತ್ತಿದ್ದಾರೆ. ತಮ್ಮ ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಮಕ್ಕಳಿಗೆ ಚರಕ ಅಂದರೆ ಏನು?, ಹೇಗೆ ನೂಲುತ್ತಾರೆ ಎಂದೆಲ್ಲಾ ಅಜ್ಜಿ ತಿಳಿಸಿ ಕೊಡುತ್ತಿದ್ದಾರೆ.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ಸುವರ್ಣಾ ಚಿನಗುಡಿ, "ದುಡಿಮೆ ಹೆಚ್ಚಾಕ್ಕೆತಿ. ಆದ್ರ, ರೊಕ್ಕ ಕಮ್ಮಿ ಸಿಗ್ತೈತಿ. 1 ನೂಲಿನ ಉಂಡಿಗೆ 10 ರೂ. ಇದು ಯಾದಕ್ಕೂ ಸಾಕಾಗಾತಿಲ್ಲ. ನಮಗ ಪೇಮೆಂಟ್ ಹೆಚ್ಚ ಮಾಡಿದ್ರ ಬಾಳ ಚಲೋ ಆಗ್ತೈತಿ. ಈಗ ನಮಗೂ ವಯಸ್ಸಾಗೆತಿ. ಏನಾದರೂ ಸ್ವಲ್ಪ ಪೆನ್ಷನ್ ಕೊಟ್ಟರ ಇಳಿ ವಯಸ್ಸದಾಗ ಆರಾಮ ಇರಬಹುದು" ಎಂದು ಅಲವತ್ತುಕೊಂಡರು.
"ಈ ವಸ್ತು ಪ್ರದರ್ಶನಕ್ಕ ಬೆಳಿಗ್ಗೆ 10 ಗಂಟೆಕ ಬರ್ತೆನಿ. ಸಾಯಂಕಾಲ 6.30ರತನಕ ನೂಲುತ್ತೇನರಿ. 10 ದಿನ ಇಲ್ಲಿಗೆ ಬಾ ಅಂದಿದ್ದಾರೆ. ಇದಕ್ಕ ಎಷ್ಟು ಪೇಮೆಂಟ್ ಕೊಡುತ್ತಾರೋ ನೋಡಬೇಕು. ಮಂದಿ ಎಲ್ಲಾರೂ ನನ್ನ ಅಂತೇಕ ಬಂದ ಮಾತಾಡಿಸಿ, ನೂಲುವುದು ನೋಡಿ, ಫೋಟೋ ತಗೊಂಡ ಮುಂದ ಹೋಗ್ತಾರೆ ಎಂದ ಸುವರ್ಣಾ ಚಿನಗುಡಿ, "ಮೊದಲು ನಮ್ಮ ತಾಯಿ ನೂಲುತ್ತಿದ್ದರು. 20 ವರ್ಷಗಳಿಂದ ನಾನು ನೂಲಾತೆನರಿ. ನಮ್ಮ ಇಬ್ಬರು ಸಹೋದರರ ಪತ್ನಿಯರು ನೂಲುತ್ತಾರೆ. ಒಟ್ಟಾರೆ ನಮ್ಮ ಮನೆಯರೆಲ್ಲಾ ಇದನ್ನೇ ನಂಬಿದ್ದೇವೆ. ಸರ್ಕಾರ ನಮಗ ಅನುಕೂಲ ಮಾಡಬೇಕು" ಎಂದು ಕೇಳಿಕೊಂಡರು.
ವಸ್ತು ಪ್ರದರ್ಶನಕ್ಕೆ ಬಂದಿದ್ದ ಪೂಜಾ ಮಾತನಾಡಿ, "ಮುಂದೆ ಚರಕ ಅಂತಾ ಒಂದು ವಸ್ತು ಇತ್ತು, ಅದರಿಂದ ನೂಲುತ್ತಿದ್ದರು ಅಂತಾನೇ ಗೊತ್ತಾಗದಷ್ಟು ಕಾಲ ಬದಲಾಗಬಹುದು. ಹಾಗಾಗಿ, ನಮ್ಮ ಮಕ್ಕಳಿಗೆ ತೋರಿಸುತ್ತಿದ್ದೇವೆ. ಅವರು ತುಂಬಾ ಆಶ್ಚರ್ಯದಿಂದ ನೋಡಿದರು" ಎಂದರು.
ಗಾಂಧೀಜಿ ಪ್ರೇರಣೆ: ಮಹಾತ್ಮಾ ಗಾಂಧೀಜಿ 1937ರಲ್ಲಿ ಹುದಲಿಗೆ ಕಾಲಿಟ್ಟ ಬಳಿಕ ಈ ಊರಿನ ಚಿತ್ರಣವೇ ಬದಲಾಯಿತು. ಬಾಪೂಜಿ ಪ್ರೇರಣೆಯಿಂದ ಖಾದಿ ಈ ಊರಿನ ಜನರ ಉಸಿರಾಯಿತು. ಪ್ರತಿಯೊಬ್ಬರೂ ನೂಲುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಹುದಲಿಯ ಖಾದಿ ಗ್ರಾಮೋದ್ಯೋಗ ಮತ್ತು ಸಹಕಾರಿ ಉತ್ಪಾದಕ ಸಂಘದಡಿ ನಿತ್ಯ ನೂರಕ್ಕೂ ಅಧಿಕ ಮಹಿಳೆಯರು ನೂಲುವ ಕೆಲಸದಲ್ಲಿ ತೊಡಗಿದ್ದಾರೆ. ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿರುವ ಇವರ ಬದುಕಿಗೆ ಸರ್ಕಾರ ನೆರವಿನಹಸ್ತ ಚಾಚುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಖಾದಿ ಉತ್ಸವ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬಿಗ್ ರೆಸ್ಪಾನ್ಸ್: 4 ದಿನಗಳಲ್ಲಿ 1.3 ಕೋಟಿ ವ್ಯಾಪಾರ..!