ಬೆಂಗಳೂರು: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದಡಿ ಕಾನ್ಸ್‌ಟೇಬಲ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೇಖಾ ಎಂಬುವವರು ನೀಡಿರುವ ದೂರಿನ ಅನ್ವಯ ಇಂದಿರಾನಗರ ಠಾಣೆಯಲ್ಲಿ ಪ್ರಸ್ತುತ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮನೋಜ್.ಎಸ್ ಹಾಗೂ ಇತರರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರೆ ರೇಖಾ ಅವರ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಪ್ರಕರಣದ ನ್ಯಾಯಾಲಯದ ವಿಚಾರಣೆ ವಿಚಾರವಾಗಿ ಪೊಲೀಸ್ ಠಾಣೆಗೆ ಬಂದು ಹೋಗುವಾಗ ಕಾನ್ಸ್‌ಟೇಬಲ್ ಮನೋಜ್ ಪರಿಚಯವಾಗಿತ್ತು. ನಂತರ ಸ್ನೇಹ ಪ್ರೇಮವಾಗಿ ಬದಲಾಗಿ 2024ರಲ್ಲಿ ನಂಜನಗೂಡಿನಲ್ಲಿ ಇಬ್ಬರೂ ಮದುವೆಯಾಗಿದ್ದರು. ಬಳಿಕ ವೈಯ್ಯಾಲಿಕಾವಲ್‌ನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಯಾಗಿತ್ತು. ಬಳಿಕ ವಸಂತನಗರದ ಪೊಲೀಸ್ ಕ್ವಾಟ್ರಸ್‌ನಲ್ಲಿ ಇಬ್ಬರೂ ವಾಸವಿದ್ದರು. ಹೀಗಿರುವಾಗ ಮನೋಜ್ ಅವರು ತಮಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. 'ಈಗಾಗಲೇ ಎರಡು ಹೆಣ್ಣುಮಕ್ಕಳಿರುವ ನಿನ್ನನ್ನು ಮದುವೆಯಾಗುವ ಬದಲು ಬೇರೆ ಮದುವೆಯಾಗಿದ್ದರೆ ವರದಕ್ಷಿಣೆ ಕೊಡುತ್ತಿದ್ದರು' ಎಂದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ರೇಖಾ ದೂರಿದ್ದಾರೆ.
ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಕಾನ್ಸ್‌ಟೇಬಲ್ ಮನೋಜ್ ಅವರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಫುಡ್ ಡಿಲೆವರಿ ಬಾಯ್ ಅಟ್ಟಾಡಿಸಿ ಹೊಡೆದ ರೆಸ್ಟೋರಂಟ್ ಸಿಬ್ಬಂದಿ: ಬೆಂಗಳೂರಲ್ಲಿ ಪ್ರಕರಣ