ಹೈದರಾಬಾದ್: ಪ್ರತಿದಿನ ಸ್ನಾನ ಮಾಡುವುದು ಪ್ರತಿನಿತ್ಯದ ಅಭ್ಯಾಸಗಳಲ್ಲಿ ಒಂದು. ಕೆಲವರು ದುರ್ವಾಸನೆ ಕಾರಣಕ್ಕೆ ಮಾಡಿದರೆ, ಮತ್ತೆ ಕೆಲವು ನಿತ್ಯದ ರೂಢಿಯಂತೆ ಮಾಡುತ್ತಾರೆ. ಈ ಸ್ನಾನ ಮಾಡುವ ಅಭ್ಯಾಸ ಪ್ರದೇಶಗಳಿಗೆ ತಕ್ಕಂತೆ ಬೇರೆಯೇ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕದಲ್ಲಿ ಮೂರನೇ ಎರಡರಷ್ಟು ಜನರು ಪ್ರತಿದಿನ ಸ್ನಾನ ಮಾಡಿದರೆ, ಆಸ್ಟ್ರೇಲಿಯಾದಲ್ಲಿ ಶೇ80ರಷ್ಟು ಜನ ಮಾತ್ರ ಪ್ರತಿದಿನ ಸ್ನಾನದ ಮೊರೆ ಹೋಗುತ್ತಾರೆ. ಚೀನಾದಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ವಾರದಲ್ಲಿ ಎರಡು ದಿನ ಮಾತ್ರ ಸ್ನಾನ ಮಾಡುತ್ತಾರೆ. ಆದರೆ, ಭಾರತದಲ್ಲಿ ಬಹುತೇಕರು ನಿತ್ಯ ಸ್ನಾನ ಮಾಡುತ್ತಾರೆ. ನಿತ್ಯ ಅಥವಾ ಪದೇ ಪದೇ ಸ್ನಾನ ಮಾಡುವುದರಿಂದ ಆಗುವ ಅನುಕೂಲ ಮತ್ತು ಅನಾಕೂಲಗಳೇನು ಅನ್ನೋದನ್ನು ತಿಳಿಯೋಣ.
ತಜ್ಞರು ಹೇಳುವಂತೆ, ಸಾಮಾನ್ಯವಾಗಿ ನಮ್ಮ ಚರ್ಮವನ್ನು ರಕ್ಷಿಸಲು ತ್ವಚೆಯ ಮೇಲೆ ಎಣ್ಣೆಯ ಪದರ ಇರುತ್ತದೆ. ಹಾಗೇ ಚರ್ಮದ ಮೇಲೆ ಉತ್ತಮ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳೂ ಇರುತ್ತವೆ. ಆಗಾಗ್ಗೆ ಸ್ನಾನ ಮತ್ತು ತ್ವಚೆಯನ್ನು ಉಜ್ಜುವುದರಿಂದ ಇವು ಮಾಯವಾಗುತ್ತವೆ ಎಂದು ಅವರು ತಿಳಿಸುತ್ತಾರೆ. ಅದರಲ್ಲೂ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಇದು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ತ್ವಚೆಯು ಒಣಗುವುದು, ಅಹಿತಕರ ಮತ್ತು ತುರಿಕೆ ಉಂಟಾಗುತ್ತದೆ. ಒಣ ಚರ್ಮವು ಬಿರುಕು ಮೂಡಿ, ಕೆಟ್ಟ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಬಹುದು. ಇದರಿಂದ ತ್ವಚೆ ಸಮಸ್ಯೆ ಹಾಗೂ ಅಲರ್ಜಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಇದು "ದಿ ಎಫೆಕ್ಟ್ಸ್ ಆಫ್ ಡೈಲಿ ಬಾತಿಂಗ್ ಆನ್ ದ ಸ್ಕಿನ್ ನ್ಯಾಚುರಲ್ ಮಾಶ್ಚುರೈಸರ್ ಬ್ಯಾರಿಯರ್" ಎಂಬ 2018ರಲ್ಲಿ ಹಾರ್ವರ್ಡ್ ಹೆಲ್ತ್ ಪಬ್ಲಿಕೇಷನ್ನಲ್ಲಿ ಪ್ರಕಟವಾದ ಜರ್ನಲ್ನಲ್ಲೂ ತಿಳಿಸಲಾಗಿದೆ.
ಸ್ನಾನದ ಸಮಯದಲ್ಲಿ ಬಳಸುವ ಆಂಟಿಬ್ಯಾಕ್ಟೀರಿಯಲ್ ಸೋಪುಗಳು ಉತ್ತಮ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ ಎಂದು ತಜ್ಞರು ಹೇಳುತ್ತಾರೆ. ಇದು ಚರ್ಮದ ಮೇಲಿನ ಸೆಬಾಸಿಯಸ್ ಗ್ರಂಥಿಗಳನ್ನು ತೆಗೆದು ಹಾಕಿ, ಸಮತೋಲನಕ್ಕೆ ಅಡ್ಡಿಪಡಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇವು ತುಂಬಾ ಉಪಯುಕ್ತ ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಕೆಲವು ಶಿಶುವೈದ್ಯರು ಮತ್ತು ಚರ್ಮರೋಗ ತಜ್ಞರು ಪ್ರತಿದಿನ ಸ್ನಾನ ಮಾಡದಂತೆ ಸಲಹೆ ನೀಡುತ್ತಾರೆ. ಆಗಾಗ್ಗೆ ಸ್ನಾನ ಮಾಡುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ಕಡಿಮೆ ಮಾಡಬಹುದು ಎಂದು ಎಚ್ಚರಿಸುತ್ತಾರೆ.
ಆಗಾಗ್ಗೆ ಸ್ನಾನ ಮಾಡುವುದರಿಂದ, ದೇಹ ಶುದ್ಧೀಕರಣವಾಗುತ್ತದೆ. ಇದು ಆರೋಗ್ಯ ಪ್ರಯೋಜನಗಳನ್ನು ಹೊರತುಪಡಿಸಿ, ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ನಾನಕ್ಕೆ ಬಳಸುವ ನೀರು, ಎಣ್ಣೆ, ಸಾಬೂನು, ಶಾಂಪೂಗಳಿಂದ ಅಲರ್ಜಿ ಉಂಟಾಗುತ್ತದೆ. ಸ್ನಾನ ಮಾಡುವ ನೀರಿನಲ್ಲಿ ಇರುವಂತಹ ಉಪ್ಪು, ಖನಿಜಗಳು, ಕ್ಲೋರಿನ್ ಮತ್ತು ಫ್ಲೋರೈಡ್‌ನಂತಹ ರಾಸಾಯನಿಕಗಳು ಸಹ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ.
ಯಾವಾಗ ಸ್ನಾನ ಉತ್ತಮ? ಸ್ನಾನಕ್ಕೆ ನಿರ್ದಿಷ್ಟ ಸಮಯದ ಚೌಕಟ್ಟು ಇಲ್ಲ ಎಂದು ತಜ್ಞರು ಹೇಳುತ್ತಾರೆ. ಕೆಲವು ವೈದ್ಯರು ನೀವು ಇದನ್ನು ಪ್ರತಿದಿನ ಮಾಡಬೇಕು ಎಂದು ಹೇಳಿದರೆ, ಮತ್ತೆ ಕೆಲವರು ವಾರಕ್ಕೆ ಎರಡು ಅಥವಾ ಮೂರು ಬಾರಿ ಸಾಕು ಎನ್ನುತ್ತಾರೆ. ಇದು ವ್ಯಕ್ತಿಯ ದೈಹಿಕ ಸ್ಥಿತಿ ಮತ್ತು ಜೀವನಶೈಲಿಯನ್ನು ಅವಲಂಬಿಸಿ ಬದಲಾಗುತ್ತದೆ. ಕಚೇರಿಗಳ ಚಳಿಯಲ್ಲಿ ಕುಳಿತುಕೊಳ್ಳುವವರಿಗಿಂತ ಬಿಸಿಲಿನಲ್ಲಿ ಬೆವರಿನಲ್ಲಿ ಕೆಲಸ ಮಾಡುವವರು ಹೆಚ್ಚು ಸ್ನಾನ ಮಾಡಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಎಷ್ಟು ಹೊತ್ತು ಸ್ನಾನ ಮಾಡಬೇಕು : ನಮ್ಮಲ್ಲಿ ಕೆಲವರು ಬಹಳ ಹೊತ್ತು ಸ್ನಾನ ಮಾಡುತ್ತಾರೆ. ನೀರಿನಲ್ಲಿ ಹೆಚ್ಚು ಹೊತ್ತು ಇದ್ದಾಗ ಅದು ತ್ವಚೆ ಹಾಗೂ ಕೂದಲಿಗೆ ಹಾನಿ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ದಿನದಲ್ಲಿ ಸುಮಾರು 3 ರಿಂದ 5 ನಿಮಿಷಗಳ ಕಾಲ ಸ್ನಾನ ಮಾಡಿದರೆ ಸಾಕು. ದೇಹದ ಪ್ರತಿಯೊಂದು ಭಾಗವನ್ನು ಉಜ್ಜಿ ತೊಳೆಯುವ ಅವಶ್ಯಕತೆ ಇಲ್ಲ. ಆದರೆ, ಕಂಕಳು, ಮುಖಕ್ಕೆ ವಿಶೇಷ ಗಮನ ನೀಡಬೇಕು ಎನ್ನುತ್ತಾರೆ. ಬಳಕೆ ಮಾಡುವ ನೀರು ಕೂಡ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಹೊರಗೆ ಚಳಿ ಇದ್ದಾಕ್ಷಣ ಹಲವರು ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ಹೀಗೆ ಮಾಡುವುದರಿಂದ ತ್ವಚೆ ಬೇಗನೆ ಒಣಗಿ ತುರಿಕೆ ಉಂಟಾಗುತ್ತದೆ. ಈ ಹಿನ್ನೆಲೆ ಸಾಧ್ಯವಾದಷ್ಟು ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಬೇಕು ಎಂದು ಸಲಹೆ ನೀಡುತ್ತಾರೆ.
ಪ್ರತಿನಿತ್ಯ ಶಾಂಪೂ ಬಳಕೆ?
ಪ್ರತಿದಿನ ಶಾಂಪೂ ಬಳಕೆ ಮಾಡುವ ಅವಶ್ಯಕತೆ ಇಲ್ಲ. ವಾರಕ್ಕೆ ಎರಡರಿಂದ ಮೂರು ಬಾರಿ ಶಾಂಪೂ ಬಳಕೆ ಸಾಕು. ಕೂದಲು ಹೆಚ್ಚು ಎಣ್ಣೆಯುಕ್ತವಾಗಿದ್ದರೆ, ಶಾಂಪೂ ಬಳಕೆ ಮಾಡಬೇಕು ಎನ್ನುತ್ತಾರೆ.
ಓದುಗರಿಗೆ ಮುಖ್ಯ ಸೂಚನೆ : ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಹುಣಸೆಹಣ್ಣು ಸೇವಿಸುವುದರಿಂದ ಶುಗರ್ ಹೆಚ್ಚಾಗುತ್ತಾ?: ಸಂಶೋಧನೆ ತಿಳಿಸಿದ ಆ ಮಹತ್ವದ ವಿಚಾರವೇನು ಗೊತ್ತಾ?
ಇದನ್ನೂ ಓದಿ: ಬಜೆಟ್ನಲ್ಲಿ 'ಮಖಾನ' ಬಗ್ಗೆ ತಿಳಿಸಿದ್ದೇನು? ಮಖಾನದಿಂದ ಬಿಪಿ & ಶುಗರ್ ನಿಯಂತ್ರಣ: ತಜ್ಞರು ಹೇಳೋದೇನು?