ಬಳ್ಳಾರಿ: ಮಗಳನ್ನು ಪ್ರೀತಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪ್ರೀತಿಸುತ್ತಿದ್ದ ಯುವಕನನ್ನು ಹುಡುಗಿಯ ತಂದೆ ಹಾಗೂ ಅಣ್ಣ ಸೇರಿ ಕೊಲೆಗೈದ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಇದೀಗ ಪ್ರಕರಣದ ಆರೋಪಿಗಳಾದ ಡಿ.ಮಲ್ಲಯ್ಯ (45) ಹಾಗೂ ಸುರೇಶ್ (21) ಎಂಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ ಗೌಡ (22) ಕೊಲೆಯಾಗಿದ್ದರು.
ಎಸ್ಪಿ ಡಾ.ಶೋಭಾರಾಣಿ ಮಾತನಾಡಿ, "ಜ.7ರಂದು ಹಗರಿ ಬಳಿ ನದಿಯ ದಡದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಮಂಜುನಾಥ್ ಗೌಡ ಅವರ ಮೃತದೇಹ ಎಂದು ತಿಳಿಯಿತು. ತನಿಖೆ ಮಾಡಿದಾಗ ಕೊಲೆ ಕೇಸ್ ಎಂದು ಗೊತ್ತಾಗಿ, ಇದೀಗ ಮಲ್ಲಯ್ಯ ಹಾಗೂ ಸುರೇಶ್ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ" ಎಂದರು.
"ಮಂಜುನಾಥ ಗೌಡ ಓರ್ವ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಯ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಮಗಳ ತಂಟೆಗೆ ಬರದಂತೆ ಬಹಳಷ್ಟು ಬಾರಿ ಎಚ್ಚರಿಸಿದ್ದರು. ಹೀಗಿದ್ದರೂ ಹುಡುಗ ಪ್ರೀತಿಯನ್ನು ಮುಂದುವರೆಸಿದ್ದ. ಇದೇ ದ್ವೇಷದಿಂದ ಮಂಜುನಾಥ್ಗೆ ಹುಡುಗಿಯ ಮೊಬೈಲ್ನಿಂದ ಕರೆ ಮಾಡಿ ಕರೆಸಿಕೊಂಡು, ಕೊಲೆ ಮಾಡಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
''7ನೇ ತಾರೀಖಿನಂದು ಮೃತದೇಹ ಸಿಕ್ಕಿದೆ. ದೇಹ ಸಂಪೂರ್ಣ ಕೊಳೆತು ಹೋಗಿದ್ದು, ನಾಯಿಗಳು ಕಿತ್ತಾಕಿರುವುದರಿಂದ ಅಸ್ಥಿಪಂಜರದ ರೀತಿಯಲ್ಲಿ ಸಿಕ್ಕಿದೆ. ರಾರಾವಿಯ ಗ್ರಾಮದ ಹೊರವಲಯದ ಹುಣಸೆ ಮರದ ತೋಪಿನಲ್ಲಿ ಕೊಲೆ ಮಾಡಿದ್ದಾರೆ. ಕಾಲು ಮಾತ್ರ ಹೂತಿಟ್ಟಿದ್ದರು. ಉಳಿದ ದೇಹ ಹೊರಗಡೆ ಇತ್ತು. ಈಗ ಅದನ್ನು ಡಿಎನ್ಎ ಟೆಸ್ಟ್ಗೆ ಕಳುಹಿಸುತ್ತಾರೆ'' ಎಂದು ತಿಳಿಸಿದರು.
ಎಸ್ಪಿ ಡಾ.ಶೋಭಾರಾಣಿ ವಿ.ಜೆ ಮಾರ್ಗದರ್ಶನದ ಮೇರೆಗೆ ಡಿಎಸ್ಪಿ ವೆಂಕಟೇಶ ನೇತೃತ್ವದಲ್ಲಿ ಸಿರುಗುಪ್ಪ ವೃತ್ತ ನಿರೀಕ್ಷಕ ಹನುಮಂತಪ್ಪ ವೈ.ಎಸ್., ಪೊಲೀಸ್ ಸಬ್ಇನ್ಸ್ಪೆಕ್ಟರ್ ಪರಶುರಾಮ್, ಪಿಎಸ್‌ಐ ಸಿರುಗುಪ್ಪ, ಶಶಿಧರ ವೈ, ಪಿಎಸ್‌ಐ ಹಲ್ಗೊಳ್ಳಿ ಹಾಗೂ ಸಿಬ್ಬಂದಿಗಳಾದ ಬಾಲಚಂದ್ರ ರಾಥೋಡ್, ಈರಣ್ಣ, ವಿಷ್ಣುಮೋಹನ, ಮುದುಕಯ್ಯ ಶಿಕಾಲಿ, ಅಮರೇಶ, ಕುಪ್ಪಣ್ಣ, ಮಲ್ಲನಗೌಡ ಕಾರ್ಯಾಚರಣೆ ಮಾಡಿ ಪತ್ತೆ ಹಚ್ಚಿದ್ದಾರೆ. ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಎಸ್ಪಿ ಶೋಭಾರಾಣಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಪತ್ನಿಗೆ ಸ್ಕ್ರೂ ಡ್ರೈವರ್ನಿಂದ ಚುಚ್ಚಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ - LIFE IMPRISONMENT FOR WIFE MURDER