ಕ್ಯಾನ್ಸರ್ ರೋಗದ ಆರಂಭಿಕ ಪತ್ತೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ಫೆಬ್ರವರಿ 4ನ್ನು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ರೋಗದ ವಿರುದ್ಧ ಹೋರಾಡುವ ಬಗ್ಗೆ ಜನರಿಗೆ ಮಾಹಿತಿ ನೀಡಲು, ಶಿಕ್ಷಣ ನೀಡಲು ಮತ್ತು ಒಗ್ಗೂಡಿಸಲು ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿಸಿ) ಈ ಜಾಗತಿಕ ಕ್ರಮವನ್ನು ಮುನ್ನಡೆಸುತ್ತಿದೆ. ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿ, ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ.
ಶಿವರಾಜ್ಕುಮಾರ್ : ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಇತ್ತೀಚೆಗಷ್ಟೇ ಕ್ಯಾನ್ಸರ್ ಗೆದ್ದು ಬಂದಿದ್ದಾರೆ. 2024ರ ಡಿಸೆಂಬರ್ 24ರಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸ್ಯಾಂಡಲ್ವುಡ್ನ ಖ್ಯಾತ ನಟ, ಅಲ್ಲೇ ಕೆಲ ದಿನಗಳವರೆಗೆ ಸೂಕ್ತ ಚಿಕಿತ್ಸೆ, ವಿಶ್ರಾಂತಿ ಪಡೆದುಕೊಂಡರು. 2024ರ ಜನವರಿ 26ರಂದು ರಾಜ್ಯಕ್ಕೆ ಮರಳಿದರು. ನಂತರ, ಪತ್ನಿ ಗೀತಾ, ಸಂಬಂಧಿಕರು, ಆಪ್ತರು, ವೈದ್ಯರ ತಂಡ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಶಿವಣ್ಣ ಧನ್ಯವಾದ ಅರ್ಪಿಸಿದರು.
ಸಂಜಯ್ ದತ್ : 2020ರಲ್ಲಿ ಬಾಲಿವುಡ್ನ ಬಹುಬೇಡಿಕೆ ನಟ ಸಂಜಯ್ ದತ್ ಅವರಿಗೆ 4ನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯ್ತು. ಉಸಿರಾಟದ ತೊಂದರೆ ಅನುಭವಿಸಿದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ನಾನ್ ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ ಇರುವುದು ಪತ್ತೆಯಾಯ್ತು. ನಂತರ ಮುನ್ನಾ ಭಾಯಿ ಎಂಬಿಬಿಎಸ್ ನಟ ಮುಂಬೈನಲ್ಲಿ ಚಿಕಿತ್ಸೆ ಪಡೆದರು. 2021ರಲ್ಲಿ ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂದು ಘೋಷಿಸಲಾಯಿತು.
ಸೋನಾಲಿ ಬೇಂದ್ರೆ : ಹಮ್ ಸಾಥ್ ಸಾಥ್ ಹೈ ನಟಿ ಸೋನಾಲಿ ಬೇಂದ್ರೆಗೆ 2018ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯ್ತು. ನಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚಿಕಿತ್ಸೆಯ ಕುರಿತು ಅಪ್ಡೇಟ್ಸ್ ಹಂಚಿಕೊಂಡರು. ಆ ಪ್ರಕಾರ, ನ್ಯೂಯಾರ್ಕ್ನಲ್ಲಿ 4ನೇ ಹಂತದ ಮೆಟಾಸ್ಟಾಟಿಕ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಅವರಿಗೆ ಬದುಕುಳಿಯುವ ಸಾಧ್ಯತೆ ಕೇವಲ ಶೇ.30ರಷ್ಟಿದೆ ಎಂದು ಹೇಳಿದ್ದರೂ, ನಟಿ ಈ ಹೋರಾಟದಲ್ಲಿ ಜಯಿಸಿದರು. ಕೀಮೋಥೆರಪಿಯಂತಹ ಕಠಿಣ ಕ್ಷಣದಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಅಪಾರವಾಗಿತ್ತು ಎಂಬುದನ್ನು ಬಹಿರಂಗಪಡಿಸಿದರು. ನಟಿ 2021ರಲ್ಲಿ ಕ್ಯಾನ್ಸರ್ ಮುಕ್ತರಾದರು.
ಮನೀಷಾ ಕೊಯಿರಾಲ : ಮನ್ ನಟಿ ಮನೀಷಾ ಕೊಯಿರಾಲಾ 2012ರಲ್ಲಿ, ತಮ್ಮ 42ನೇ ಹರೆಯದಲ್ಲಿ ಕ್ಯಾನ್ಸರ್‌ಗೆ (ovarian cancer) ಒಳಗಾದರು. ತಮ್ಮ ಕ್ಯಾನ್ಸರ್ ಹೋರಾಟದ ಉದ್ದಕ್ಕೂ ಸಕಾರಾತ್ಮಕವಾಗಿಯೇ ಇದ್ದು, ಅಭಿಮಾನಿಗಳಿಗೆ ಧೈರ್ಯ ತುಂಬಿದ್ರು. ವಿದೇಶದಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿಗೆ ಒಳಗಾದರು.
ಮಹಿಮಾ ಚೌಧರಿ : ಪರ್ದೇಸ್ ಮತ್ತು ಧಡ್ಕನ್ ಚಿತ್ರಗಳ ಪಾತ್ರಗಳಿಗೆ ಹೆಸರುವಾಸಿಯಾಗಿರೋ ನಟಿ ಮಹಿಮಾ ಚೌಧರಿ ಅವರಿಗೆ 2022ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅನುಪಮ್ ಖೇರ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಅವರ ಕ್ಯಾನ್ಸರ್ ಹೋರಾಟದ ಬಗ್ಗೆ ತಿಳಿದ ನಂತರ ಅಭಿಮಾನಿಗಳು ಆಘಾತಕ್ಕೊಳಗಾದ್ರು. ಕೀಮೋಥೆರಪಿ ಮತ್ತು ಹಲವು ಚಿಕಿತ್ಸೆ ಬಳಿಕ ಕ್ಯಾನ್ಸರ್ ಮುಕ್ತರಾದ್ರು.
ಇದನ್ನೂ ಓದಿ: ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್: ವಿಡಿಯೋ ನೋಡಿ
ಕಿರಣ್ ಖೇರ್ : ಹಿರಿಯ ನಟಿ ಕಿರಣ್ ಖೇರ್ ಅವರಿಗೆ ಮಲ್ಟಿಪಲ್ ಮೈಲೋಮಾ, ಒಂದು ರೀತಿಯ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರ ಮಗ ಸಿಕಂದರ್ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ನಟಿಯ ಆರೋಗ್ಯದ ಅಪ್ಡೇಟ್ಸ್ ಹಂಚಿಕೊಂಡರು.
ಇದನ್ನೂ ಓದಿ: 777 ಚಾರ್ಲಿ To ಹಾಥಿ ಮೇರೆ ಸಾಥಿ : ಪ್ರಾಣಿಗಳು ಪ್ರಮುಖ ಪಾತ್ರ ವಹಿಸಿದ ಸಿನಿಮಾಗಳು
ಇವರಲ್ಲದೇ ಲಿಸಾ ರೇ, ರಾಕೇಶ್ ರೋಷನ್, ಅನುರಾಗ್ ಬಸು ಮತ್ತು ತಹಿರಾ ಕಶ್ಯಪ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕ್ಯಾನ್ಸರ್ ವಿರುದ್ಧ ಹೋರಾಡಿ ಬಲಿಷ್ಠರಾಗಿ ಹೊರಹೊಮ್ಮಿದ್ದಾರೆ.