ತಿರುಪತಿ(ಆಂಧ್ರ ಪ್ರದೇಶ): ಇಳಿವಯಸ್ಸಿನ ಆಸರೆಗಾಗಿ ಹಣ ಉಳಿತಾಯ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಮಹಿಳೆ ಹೀಗೆ ಕೂಡಿಟ್ಟ ತಮ್ಮ 35 ವರ್ಷದ ಸಂಪಾದನೆಯನ್ನು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಶ್ರೀ ವೆಂಕಟೇಶ್ವರ ಸರ್ವ ಶ್ರೇಯಸ್ (ಎಸ್‌ವಿ ಬಾಲಮಂದಿರ) ಟ್ರಸ್ಟ್‌ಗೆ ದೇಣಿಗೆಯಾಗಿ ನೀಡಿದ್ದಾರೆ. ಒಟ್ಟು 50 ಲಕ್ಷ ಹಣವನ್ನು ದೇಣಿಗೆ ಕೊಟ್ಟಿದ್ದಾರೆ.
ರೇಣಿಗುಂಟದ ಸಿ.ಮೋಹನ ದಾನ ಮಾಡಿದ ಮಹಿಳೆ. ಇವರು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ನಿರ್ವಹಣೆ ವಲಯದಲ್ಲಿ ಕೊಸೊವೊ, ಅಲ್ಬೇನಿಯಾ, ಯೆಮೆನ್, ಸೌದಿ ಅರೇಬಿಯಾ ಮತ್ತು ಭಾರತದಾದ್ಯಂತ ಕಾರ್ಯನಿರ್ವಹಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ದೇಗುಲದ ಮಂಡಳಿ, 70ರ ವಯೋಮಾನದ ದಾನಿ ಮಹಿಳೆ, ತಮ್ಮ 35 ವರ್ಷದ ಸೇವೆಯಲ್ಲಿ ಗಳಿಸಿ, ಉಳಿತಾಯ ಮಾಡಿದ ಹಣವನ್ನೆಲ್ಲ ಟಿಟಿಡಿ ಶಿಕ್ಷಣ ಸಂಸ್ಥೆಗಳಲ್ಲಿರುವ ಅನಾಥ ಮತ್ತು ಬಡ ಮಕ್ಕಳ ಶಿಕ್ಷಣಕ್ಕೆ ದಾನ ಮಾಡಿದ್ದಾರೆ ಎಂದು ತಿಳಿಸಿದೆ.
ದೇಣಿಗೆ ಹಣವನ್ನು ಡಿಮ್ಯಾಂಡ್ ಡ್ರಾಫ್ಟ್(ಡಿಡಿ) ರೂಪದಲ್ಲಿ ತಿರುಮಲದಲ್ಲಿರುವ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರಿಸಿದರು.
ಟಿಟಿಡಿ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ನಿರ್ವಹಣಾ ಮಂಡಳಿಯಾಗಿದೆ.
ಇದನ್ನೂ ಓದಿ: ಮಹಾಕುಂಭದ ಸಮಾರೋಪದ ದಿನದೊಳಗೆ 2 ಸಾವಿರ ವೃದ್ಧರಿಗೆ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ವ್ಯವಸ್ಥೆ