ಬೆಂಗಳೂರು: ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 150ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಬೆಂಗಳೂರಿನ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೋಲ್ಹಾಪುರದ ಮಂಗಳವಾರ್ ಪೇಟ್ ಮೂಲದ ಪಂಚಾಕ್ಷರಿ ಸಂಗಯ್ಯ ಸ್ವಾಮಿ (37) ಬಂಧಿತ ಆರೋಪಿ. ಬಂಧಿತನಿಂದ 181 ಗ್ರಾಂ ತೂಕದ ಚಿನ್ನದ ಗಟ್ಟಿ, 333 ಗ್ರಾಂ ಬೆಳ್ಳಿಯ ವಸ್ತುಗಳು, ಚಿನ್ನ ಕರಗಿಸಲು ಬಳಸುತ್ತಿದ್ದ ಫೈರ್ ಗನ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.
ಬಾಕ್ಸಿಂಗ್ ಬಿಟ್ಟು ಕಳ್ಳತನ : ಆರೋಪಿ ಪಂಚಾಕ್ಷರಿ ಸ್ವಾಮಿಯ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆಯ ಸಾವಿನ ಬಳಿಕ ಅವರ ಕೆಲಸವನ್ನ ತಾಯಿಗೆ ನೀಡಲಾಗಿತ್ತು. ಬಾಕ್ಸಿಂಗ್ ಪಟುವಾಗಿದ್ದ ಪಂಚಾಕ್ಷರಿ ಸ್ವಾಮಿ, ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿಯೂ ಭಾಗವಹಿಸಿದ್ದರು. ಆದರೆ ಮದ್ಯಪಾನ ಹಾಗೂ ವಿಲಾಸಿ ಜೀವನದ ಗೀಳಿಗೆ ಬಿದ್ದು 2009ರಿಂದ ಪ್ರೊಫೆಷನಲ್ ಬಾಕ್ಸಿಂಗ್ ಬಿಟ್ಟು ಕಳ್ಳತನದ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
150ಕ್ಕೂ ಹೆಚ್ಚು ಮನೆ ದರೋಡೆ : ಸಾಮಾನ್ಯವಾಗಿ ಬೀಗ ಹಾಕಿರುವ ಮನೆಗಳನ್ನ ಆರೋಪಿ ಮತ್ತು ಆತನ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಫೈರ್ ಗನ್ ಬಳಸಿ ಕದ್ದ ಚಿನ್ನಾಭರಣಗಳನ್ನ ಮನೆಯಲ್ಲೇ ಕರಗಿಸುತ್ತಿದ್ದ ಆರೋಪಿ, ಬಳಿಕ ಅವುಗಳನ್ನು ಗಟ್ಟಿಯಾಗಿ ಬದಲಿಸುತ್ತಿದ್ದ ಕಾರಣ ಪತ್ತೆ ಕಾರ್ಯಕ್ಕೆ ತೊಡಕಾಗುತ್ತಿತ್ತು. ಆರೋಪಿ ಮತ್ತು ಆತನ ಗ್ಯಾಂಗ್ ವಿರುದ್ಧ ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕದ ಸೇರಿ ವಿವಿಧೆಡೆ 150ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಕಳೆದ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಕಾರಾಗೃಹವೊಂದರಿಂದ ಬಿಡುಗಡೆಯಾಗಿದ್ದ ಆರೋಪಿ, ಜನವರಿ 9ರಂದು ತನ್ನ ಸಹಚರನೊಂದಿಗೆ ಬೆಂಗಳೂರಿನ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಾಹಿತಿ ನೀಡಿದರು.
ಪ್ರಕರಣದ ತನಿಖೆ ಕೈಗೊಂಡ ಮಡಿವಾಳ ಠಾಣೆ ಪೊಲೀಸರು, ಕೋರಮಂಗಲದ ವೆಂಕಟರೆಡ್ಡಿ ಲೇಔಟ್‌ನಲ್ಲಿರುವ ಪಿಜಿಯೊಂದರಲ್ಲಿ ವಾಸವಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಪತ್ತೆ ಕಾರ್ಯ ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಲೂಟಿ ಹೊಡೆದ ದುಡ್ಡಿಂದ ಐಷಾರಾಮಿ ಜೀವನ: 5 ರಾಜ್ಯಗಳಲ್ಲಿ 80 ಪ್ರಕರಣ; ಕುಖ್ಯಾತ ದರೋಡೆಕೋರ ಸೆರೆ
ಇದನ್ನೂ ಓದಿ: 48 ಬೈಕ್ ಕಳ್ಳತನ ಮಾಡಿದ್ದ ಖದೀಮನ ಬಂಧಿಸಿದ ಪೊಲೀಸರು: ಚೋರನಿಂದ ಬೈಕ್ ವಶಕ್ಕೆ ಪಡೆದ ಖಾಕಿ