Ind vs Aus, 5th Test: ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ನಡೆಯುತ್ತಿರುವ ಟೆಸ್ಟ್ ಸರಣಿಯ 5ನೇ ಮತ್ತು ಅಂತಿಮ ಪಂದ್ಯ ಶುಕ್ರವಾರ (ನಾಳೆ) ಪ್ರಾರಂಭವಾಗಲಿದೆ. ಈಗಾಗಲೇ ನಾಲ್ಕು ಪಂದ್ಯಗಳು ಮುಕ್ತಾಯಗೊಂಡಿದ್ದು, ಆಸ್ಟ್ರೇಲಿಯಾ 2-1ರ ಅಂತರದಿಂದ ಮುನ್ನಡೆ ಸಾಧಿಸಿದೆ.
ಮತ್ತೊಂದೆಡೆ, ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಭಾರತ, ಸಿಡ್ನಿ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ಉತ್ತಮ ಲಯದಲ್ಲಿದ್ದ ಸ್ಟಾರ್ ಆಟಗಾರ ಟೆಸ್ಟ್ನಿಂದ ಹೊರಬಿದ್ದಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿರುವ ವೇಗಿ ಆಕಾಶ್ ದೀಪ್ ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಬಗ್ಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ. ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದ ಆಕಾಶ್ ದೀಪ್ ಐದು ವಿಕೆಟ್ ಪಡೆದಿದ್ದರು.
🚨 AKASHDEEP RULED OUT OF THE SYDNEY TEST MATCH...!!! 🚨 pic.twitter.com/GRsmF4jyT8
— Mufaddal Vohra (@mufaddal_vohra) January 2, 2025
ಆದ್ರೆ, ಆಕಾಶ್ ದೀಪ್ ಅವರ ಎಸೆತದಲ್ಲಿ ಹಲವಾರು ಕ್ಯಾಚ್‌ಗಳನ್ನು ಫೀಲ್ಡರ್‌ಗಳು ಕೈಬಿಟ್ಟಿದ್ದರಿಂದ ಅವರಿಗೆ ಹೆಚ್ಚಿನ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಜೊತೆಗೆ, ಆಸೀಸ್ ಬ್ಯಾಟರ್‌ಗಳು ಕೂಡ ಆಕಾಶ್ ದೀಪ್ ಬೌಲಿಂಗ್ ಎದುರಿಸಲು ಕಷ್ಟಪಟ್ಟಿದ್ದರು. 28ರ ಹರೆಯದ ಆಕಾಶ್ ದೀಪ್ ಈ ಸರಣಿಯಲ್ಲಿ ಒಟ್ಟು 87.5 ಓವರ್ ಬೌಲಿಂಗ್ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, "ಆಕಾಶ್ ದೀಪ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ, ಮುಂದಿನ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ" ಎಂದು ತಿಳಿಸಿದ್ದಾರೆ. ಆದರೆ ಅವರು, ದೀಪ್ ಸ್ಥಾನಕ್ಕೆ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.
ಪ್ರಸಿದ್ಧ ಕೃಷ್ಣ ಅಥವಾ ಹರ್ಷಿತ್ ರಾಣಾಗೆ ಸ್ಥಾನ?: ಆಸ್ಟ್ರೇಲಿಯಾದ ಕಠಿಣ ಪಿಚ್‌ಗಳಿಂದಾಗಿ ವೇಗದ ಬೌಲರ್‌ಗಳು ಮೊಣಕಾಲು, ಪಾದ ಅಥವಾ ಬೆನ್ನುನೋವಿಗೆ ತುತ್ತಾಗುತ್ತಿರುತ್ತಾರೆ ಎಂದು ಕ್ರಿಕೆಟ್ ವಿಶ್ಲೇಷಕರು ತಿಳಿಸಿದ್ದಾರೆ. ಇದೀಗ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಪ್ರಸಿದ್ಧ ಕೃಷ್ಣ ಅಥವಾ ಹರ್ಷಿತ್ ರಾಣಾ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಆಕಾಶ್ ದೀಪ್ ಟೆಸ್ಟ್ ದಾಖಲೆ: ಆಕಾಶ್ ಈವರೆಗೆ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 12 ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರುವ ಅವರು 3.59 ಎಕಾನಮಿಯಲ್ಲಿ 15 ವಿಕೆಟ್ ಪಡೆದಿದ್ದಾರೆ. 63 ರನ್ಗಳಿಗೆ 3 ವಿಕೆಟ್ ಪಡೆದಿರುವುದು ಇವರ ಬೆಸ್ಟ್ ಇನ್ನಿಂಗ್ಸ್.
ಇದನ್ನೂ ಓದಿ: ಅಚ್ಚರಿ! ಈ 5 ಬೌಲರ್‌ಗಳು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಹೊಡೆಸಿಕೊಂಡಿಲ್ಲ!