Rapidly Spreading Scrub Typhus: ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ‘ಸ್ಕ್ರಬ್ ಟೈಫಸ್’ ಬ್ಯಾಕ್ಟೀರಿಯಾದ ಹಾವಳಿ ಹೆಚ್ಚುತ್ತಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಸೆಲ್ವವಿನಾಯಗಂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ವೈರಲ್ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಆದ್ರೆ, ಇದೀಗ ಚಳಿಗಾಲದಲ್ಲಿ ತಮಿಳುನಾಡು ರಾಜ್ಯದಲ್ಲಿ ಬ್ಯಾಕ್ಟೀರಿಯಾದ ಸೋಂಕು ಕಾಣಿಸಿಕೊಂಡಿದೆ. ಈ ಸೋಂಕನ್ನು 'ಸ್ಕ್ರಬ್ ಟೈಫಸ್' ಎಂದು ಕರೆಯಲಾಗುತ್ತದೆ. ಬ್ಯಾಕ್ಟೀರಿಯಾ ಸೋಂಕಿತ ಪರಾವಲಂಬಿಗಳು, ಕೀಟಗಳು ಮತ್ತು ರಿಕೆಟ್ಸಿಯಾ ಎಂಬ ಜೀವಿಗಳು ಮನುಷ್ಯರನ್ನು ಕಚ್ಚಿದಾಗ ಈ ಸೋಂಕು ಉಂಟಾಗುತ್ತದೆ.
ಯಾವ ಜಿಲ್ಲೆಗಳಲ್ಲಿ ಸೋಂಕು ಹರಡಿದೆ?: ಚೆನ್ನೈ, ಕಾಂಚೀಪುರಂ, ತಿರುಪತ್ತೂರ್, ತಿರುವಳ್ಳೂರು, ಚೆಂಗಲ್ಪಟ್ಟು, ರಾಣಿಪೇಟ್, ವೆಲ್ಲೂರು 7 ಜಿಲ್ಲೆಗಳಲ್ಲಿ ಅತಿ ಹೆಚ್ಚು ಹರಡಿದೆ ಎಂದು ವರದಿಯಾಗಿದೆ. ಇದಲ್ಲದೆ, ಈ ಪರಿಣಾಮವು ಪೂರ್ವ ಘಟ್ಟ ಹಾಗೂ ಪಶ್ಚಿಮ ಘಟ್ಟದಲ್ಲಿಯೂ ಕಂಡುಬರುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ಪ್ರಕಾರ, ಅರಣ್ಯ ಪ್ರದೇಶಗಳಲ್ಲಿ ಹಾಗೂ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ವಾಸಿಸುವವರು, ಚಾರಣಿಗರು ಮತ್ತು ಗರ್ಭಿಣಿಯರು ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ರೋಗಲಕ್ಷಣಗಳೇನು ಹಾಗೂ ಚಿಕಿತ್ಸೆ ಹೇಗೆ?: ಸ್ಕ್ರಬ್ ಟೈಫಸ್ ಸೋಂಕಿನಿಂದ ಬಳಲುತ್ತಿರುವ ಜನರಲ್ಲಿ ವಿವಿಧ ಲಕ್ಷಣಗಳು ಕಂಡುಬರುತ್ತವೆ.
ಪ್ರಮುಖ ಲಕ್ಷಣಗಳು:
- ಜ್ವರ
- ತಲೆನೋವು
- ದೇಹದ ತೀವ್ರ ನೋವು
- ದದ್ದುಗಳು, ದೇಹದ ತುರಿಕೆ
ಚಿಕಿತ್ಸೆ: ಸತತ 5 ದಿನಗಳ ಕಾಲ ಜ್ವರ ಹೊಂದಿರುವವರು ಈ ಸೋಂಕಿಗೆ ಒಳಗಾಗಿದ್ದಾರೆ ಎಂದು ವೈದ್ಯರು ತಿಳಿಸುತ್ತಾರೆ. ಸೋಂಕಿತರಿಗೆ ಚಿಕಿತ್ಸೆಗಾಗಿ ಅಜಿಥ್ರೊಮೈಸಿನ್ ಮತ್ತು ಡಾಕ್ಸಿಸೈಕ್ಲಿನ್ ನಂತಹ ಆ್ಯಂಟಿಬಯೋಟಿಕ್ಸ್ ನೀಡಬೇಕು. ಸರಿಯಾದ ಚಿಕಿತ್ಸೆಯೊಂದಿಗೆ 1 ರಿಂದ 2 ವಾರಗಳಲ್ಲಿ ಸಂಪೂರ್ಣ ಚೇತರಿಸಿಕೊಳ್ಳಲು ಸಾಧ್ಯವಿದೆ.
ತಡೆಗಟ್ಟುವುದು ಹೇಗೆ?: ಸ್ಕ್ರಬ್ ಟೈಫಸ್ ಬಗ್ಗೆ ಭಯ ಪಡದೆ, ಇದನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಈ ಸೋಂಕಿಗೆ ಲಸಿಕೆ ಇಲ್ಲದಿರುವುದರಿಂದ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಟ್ರಾಂಬಿಕ್ಯುಲಿಡ್ ಮಿಟೆ ಎಂಬ ರಾಸಾಯನಿಕಗಳನ್ನು ಹೊಂದಿರುವ ಕೀಟ ನಿವಾರಕಗಳನ್ನು ಬಳಸಬೇಕು. ಇದನ್ನು ಸಾಮಾನ್ಯವಾಗಿ ಸೊಳ್ಳೆ ಸುರುಳಿಗಳು, ಸ್ಪ್ರೇಗಳು ಇತ್ಯಾದಿಗಳನ್ನು ಬಳಕೆ ಮಾಡಬೇಕು. ಈ ಕೀಟನಾಶಕಗಳನ್ನು ಸಸ್ಯಗಳ ಮೇಲೆಯೂ ಸಿಂಪಡಿಸುವುದರಿಂದ ಕೀಟಗಳನ್ನು ತಡೆಗಟ್ಟಬಹುದು ಎಂದು ಆರೋಗ್ಯ ಆಧಿಕಾರಿಗಳು ಸಲಹೆ ನೀಡುತ್ತಾರೆ.
ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಈ ರೋಗಲಕ್ಷಣಗಳು ನಿಮಗಿದೆಯೇ? ಗರ್ಭಕೋಶದ ಸೋಂಕು ಆಗಿರಬಹುದು: ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ!