ಬೆಂಗಳೂರು:ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ಹೈಕೋರ್ಟ್ ಆದೇಶಿಸಿದೆ.
ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪ್ರಜ್ವಲ್ ಜಾಮೀನು ಕೋರಿದ್ದಾರೆ. ಉಳಿದಂತೆ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯ ಮೇಲೆ ಅತ್ಯಾಚಾರ ಆರೋಪ ಮತ್ತು ಅಶ್ಲೀಲ ವಿಡಿಯೋಗಳ ಹಂಚಿಕೆಯ ಸಂಬಂಧ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿ, ಈ ಆದೇಶ ನೀಡಿದೆ.
ಮೇಲ್ನೋಟಕ್ಕೆ ಅರ್ಜಿದಾಯರ ಕೃತ್ಯ ಇಂದ್ರಿಯಗಳ ಮೇಲೆ ನಿಯಂತ್ರಣ ಕಳೆದುಕೊಂಡಿರುವುದು ಮತ್ತು ಸ್ವಾಸ್ಥ್ಯ ಸಮಾಜದ ಬೆನ್ನುಹುರಿಗೆ ಚಳಿ ಹುಟ್ಟಿಸುವುದನ್ನು ಚಿತ್ರಿಸುತ್ತಿದೆ. ಮೂರು ಪ್ರತ್ಯೇಕ ಅರ್ಜಿಗಳ ಸಂಬಂಧ ದೂರುದಾರರು ದಾಖಲಿಸಿರುವ ಎಫ್‌ಐಆರ್‌ನ ಪ್ರತಿ, ಅದರಲ್ಲಿ ದೂರುದಾರೆ/ಸಂತ್ರಸ್ತೆಯರು ನೀಡಿರುವ ಹೇಳಿಕೆಗಳು ಮತ್ತು ಲೈಂಗಿಕ ದೌರ್ಜನ್ಯದ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ನಡೆಸಿರುವ ಸಂಭಾಷಣೆ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಿಳಿಸಿರುವ ಅಂಶಗಳನ್ನು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣ ಸಂಬಂಧ ಪ್ರಸರಣ/ಹಂಚಿಕೆಯಾಗಿರುವ ವಿಡಿಯೋವನ್ನು ಎಫ್‌ಎಸ್‌ಐಲ್‌ಗೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್ ವರದಿಯನ್ನು ನೋಡಿದಾಗ, ಅರ್ಜಿದಾರರು ಜಾಮೀನಿಗೆ ಅರ್ಹರೇ? ಎಂಬ ಪ್ರಶ್ನೆಯನ್ನು ಪರಿಶೀಲಿಸಿದಾಗ, ಖಂಡಿತವಾಗಿಯೂ ಇಲ್ಲ ಎಂಬ ಉತ್ತರ ಮೂಡುತ್ತದೆ. ಅರ್ಜಿದಾರರು ಎಸಗಿರುವ ಕೃತ್ಯವೂ ಹೀನಾಯವಾಗಿದೆ. ಅವರ ಮೇಲಿರುವ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿವೆ. ಸಮಾಜದಲ್ಲಿ ದೊಡ್ಡ ಸ್ಥಾನ ಹೊಂದಿರುವ ಕಾರಣದಿಂದ ಅರ್ಜಿದಾರರಿಗೆ ಈ ಅಪರಾಧಗಳನ್ನು ಮಾಡುವ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಪ್ರವೃತ್ತಿಯು ದೊಡ್ಡದಾಗಿದೆ. ಮೇಲ್ನೋಟಕ್ಕೆ ಅರ್ಜಿದಾರರು ಕೃತ್ಯ ಎಸಗಿರುವುದು ಕಂಡುಬರುತ್ತದೆ ಎಂದು ಪೀಠ ತಿಳಿಸಿದೆ.
ಜೊತೆಗೆ, ಪ್ರಕರಣ ದಾಖಲಾಗದ ನಂತರವೂ ಅರ್ಜಿದಾರರು ತನಿಖೆಗೆ ಸಹಕರಿಸಿಲ್ಲ. 32 ದಿನಗಳಿಗೂ ಹೆಚ್ಚು ಕಾಲ ಜರ್ಮನಿಯಲ್ಲಿದ್ದರು. ಇದರಿಂದ ಜಾಮೀನು ನೀಡಿದರೆ ಅರ್ಜಿದಾರ ತಲೆಮರೆಸಿಕೊಳ್ಳುವ ಅಥವಾ ಪಲಾಯನ ಮಾಡುವ ಸಾಧ್ಯತೆ ಹೆಚ್ಚಿದೆ. ಪ್ರಕರಣದ ಇಡೀ ಸಂಚಿಕೆಯನ್ನು ನೋಡಿದರೆ ಸಾಕ್ಷಿಗಳ ಬೆದರಿಕೆಯಲ್ಲಿ ಅರ್ಜಿದಾರರು ಭಾಗಿಯಾಗಿರುವ ಆರೋಪ ದಟ್ಟವಾಗಿದೆ. ಅರ್ಜಿದಾರರ ಕೃತ್ಯವು ಒಂದೆರಡು ಬಾರಿಯಲ್ಲ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಸಾಕ್ಷಿಗಳ ಬೆದರಿಕೆ ಕೃತ್ಯದಲ್ಲಿ ಪದೇ ಪದೇ ಭಾಗಿಯಾಗಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಆದ್ದರಿಂದ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪೀಠ ತೀಕ್ಷ್ಣವಾಗಿ ತಿಳಿಸಿದೆ.
ವಿಚಾರಣೆ ವೇಳೆ ಪ್ರಜ್ವಲ್ ಪರವಾಗಿ ವಾದಿಸಿರುವ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಆರೋಪಿ ಮತ್ತು ಸಂತ್ರಸ್ತೆಯು ವಿಡಿಯೋದಲ್ಲಿರುವುದರ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಪಷ್ಟತೆ ನೀಡಿಲ್ಲ. ಸಂತ್ರಸ್ತೆಯು ನೀಡಿರುವ ದೂರಿನ ವಿಶ್ವಾಸಾರ್ಹತೆಯ ಬಗ್ಗೆ ಆಕ್ಷೇಪಗಳಿವೆ. ಸಂತ್ರಸ್ತೆಯು ಲೋಕಸಭಾ ಚುನಾವಣೆಯ ಮತದಾನಕ್ಕೂ ಕೆಲವು ದಿನಗಳ ಮುಂದೆ ವಿದ್ಯುನ್ಮಾನ ಮಾಧ್ಯವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅಲ್ಲಿ ಅತ್ಯಾಚಾರದ ಆರೋಪ ಮಾಡಿಲ್ಲ. ಸಿಆರ್‌ಪಿಸಿ ಸೆಕ್ಷನ್ 164 ಹೇಳಿಕೆಯಲ್ಲಿಯೂ ಅತ್ಯಾಚಾರ ಆರೋಪ ಮಾಡಿಲ್ಲ. ಐದು ವರ್ಷ ತಡವಾಗಿ ದೂರು ನೀಡಿರುವುದಕ್ಕೆ ವಿವರಣೆ ಕೂಡ ನೀಡಿಲ್ಲ ಎಂದರು.