ಹಾಸನ:ಜಿಲ್ಲೆಯಲ್ಲಿವರುಣಾರ್ಭಟ ಜೋರಾಗಿದ್ದು, ಕಳೆದ 5 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಕ್ಷರಶಃ ಅಸ್ತವ್ಯಸ್ತವಾಗಿದೆ. ಮಳೆಯಿಂದ ದಿನದಿಂದ ದಿನಕ್ಕೆ ಅವಘಡಗಳು ಹೆಚ್ಚಾಗುತ್ತಿವೆ.
ನಿನ್ನೆಯಷ್ಟೆ ಸಕಲೇಶಪುರ - ಗುಂಡ್ಯಾ-ಮಂಗಳೂರು ಮಾರ್ಗವಾಗಿ ವಾಹನಗಳು ಸಂಚರಿಸುವ ವೇಳೆ ಶಿರಾಡಿಘಾಟ್ ಬಳಿ ಶಿರೂರು ಮಾದರಿಯಲ್ಲಿಯೇ ಗುಡ್ಡ ಕುಸಿದು ವಾಹನ ಸವಾರರು ಕ್ಷಣಾಮಾತ್ರದಲ್ಲಿ ಪಾರಾಗಿ ಬದುಕುಳಿದಿದ್ದಾರೆ. ಅದೇ ಮಾರ್ಗದ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡತಪ್ಪಲೆ ಬಳಿ ಮಾರುತಿ ಓಮ್ನಿ ಮೇಲೆ ಗುಡ್ಡ ಕುಸಿದಿದ್ದು, ಓಮ್ನಿ ಮಣ್ಣಿನಡಿ ಸಮಾಧಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ. ಶಿರಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ನಿಂದಾಗಿ ಪ್ರಯಾಣಿಕರು ಪರದಾಡಿದ್ದಾರೆ. ಅದರ ಬೆನ್ನಲ್ಲಿಯೇ ಮತ್ತೆ ಇಂದು ಗುಡ್ಡ ಕುಸಿದಿದೆ.
ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿಯ ಹೆಗ್ಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಂಕ್ಲಾಪುರ ಮಠದ ಮಾರ್ಗವಾಗಿ ಹೋಗುವ ಹೆಗ್ಗದ್ದೆಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಅತಿಯಾದ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಅದೇ ರೀತಿ ಆಲೂರು ತಾಲೂಕಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಬಸ್ ರಸ್ತೆ ಬದಿಯ ಹಳ್ಳಕ್ಕೆ ಇಳಿದಿದೆ.
ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಘಟನೆ ಮಣಿಗನಹಳ್ಳಿ ಗ್ರಾಮದ ಬಳಿ ನಡೆದಿದೆ. ಆಲೂರಿನಿಂದ ಪುರಭೈರವನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಹಾಸನ ವಿಭಾಗಕ್ಕೆ ಸೇರಿದ KA-13 F- 2103 ಸಂಖ್ಯೆಯ ಸಾರಿಗೆ ಬಸ್ ಮಳೆಯಿಂದ ನಿಯಂತ್ರಣಕ್ಕೆ ಸಿಗದೆ ಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಇಳಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಬಸ್ ಮೇಲೆತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಂಗಳೂರು ಮಂಗಳೂರು ಹೆದ್ದಾರಿಯ ಚನ್ನರಾಯಪಟ್ಟಣ ಬಳಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು ಪಲ್ಟಿಯಾಗಿದೆ. ಬೆಂಗಳೂರಿನಿಂದ ಹಾಸನ ಕಡೆಗೆ ಬರುತ್ತಿದ್ದ ಕಾರು ಮಳೆಯಿಂದ ಹಿಂಬದಿಯಿಂದ ಬರುವ ವಾಹನಕ್ಕೆ ಅನುವು ಮಾಡಿಕೊಡುವುದಕ್ಕೆ ಮುಂದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸದ್ಯ ಪ್ರಾಣಾಪಾಯದಿಂದ ಕಾರಿನಲ್ಲಿದ್ದವರು ಪಾರಾಗಿದ್ದಾರೆ.
ಹಾಸನ ಜಿಲ್ಲೆಯಲ್ಲಿ, ಮುಂದುವರಿದ ವರುಣಾರ್ಭಟಕ್ಕೆ ಇಂದು ಮಧ್ಯಾಹ್ನ ಮತ್ತೆ ಭೂಕುಸಿತ ಕಂಡಿದ್ದು, ರಸ್ತೆಗೆ ಬಾರಿ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ. ಹೀಗಾಗಿ ಸಕಲೇಶಪುರ ತಾಲ್ಲೂಕಿನಿಂದ ಹಿಡಿದು ಮಾರನಹಳ್ಳಿ ಸಮೀಪದ ತನಕ ಕಿಲೋಮೀಟರ್ಗೂ ಹೆಚ್ಚು ವಾಹನದಟ್ಟನೆ ಹೆಚ್ಚಾಗಿದೆ. ಗುಡ್ಡ ಕುಸಿದು ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು ದೌಡಾಯಿಸಿದ್ದು, ಸದ್ಯ ಸಂಜೆ ತನಕ ವಾಹನ ಸಂಚಾರ ಸ್ಥಗಿತ ಮಾಡಿದ್ದಾರೆ. ಗುಂಡ್ಯದಲ್ಲಿ ಟ್ರಾಫಿಕ್ ಜಾಮ್ ಉಂಟಾದ ಹಿನ್ನಲೆಯಲ್ಲಿ ವಾಹನಗಳನ್ನು ಬಿಸಿಲೆ ಮತ್ತು ಚಾರ್ಮಡಿ ಘಾಟ್ ಮೂಲಕ ಸಂಚರ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.
ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ ಪ್ರಕರಣ: ಬಾಲಕಿ ಅವಂತಿಕಾ, ಚಾಲಕನ ಶವ ಪತ್ತೆ; ಮೃತರ ಸಂಖ್ಯೆ 6ಕ್ಕೆ ಏರಿಕೆ - SHIRURU HILL TRAGEDY