ಬೆಂಗಳೂರು :ತಡರಾತ್ರಿ ಆನೆದಾಳಿಗೆ ಗುತ್ತಿಗೆ ಕಾವಲುಗಾರರೊಬ್ಬರು ಸಾವನ್ನಪ್ಪಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪಕ್ಕದ ಹಕ್ಕಿ ಪಿಕ್ಕಿ ಕಾಲೋನಿಯ ಚಿಕ್ಕಮಾದಯ್ಯ (45) ಸಾವನ್ನಪ್ಪಿದ್ದಾರೆ. ತಡರಾತ್ರಿ ಅರಣ್ಯ ಇಲಾಖೆ ನೀಡಿದ್ದ ಪಟಾಕಿ, ಬ್ಯಾಟರಿಯನ್ನಷ್ಟೇ ಹಿಡಿದು ಕಾಡಿಗಿಳಿದಿದ್ದ ಚಿಕ್ಕಮಾದಯ್ಯ ಕರ್ತವ್ಯ ನಿರತ ವಾಗಿರುವಾಗಲೇ ಆನೆ ದಾಳಿಗೆ ಒಳಗಾಗಿದ್ದಾರೆ.
ಈ ಹಿಂದೆ ಇವರ ಸಂಬಂಧಿ ಮಹಿಳೆ ಮೇಲೆ ಒಂಟಿ ಸಲಗ ದಾಳಿ ಮಾಡಿ ಕೊಂದಿತ್ತು. ಬೆಳಗ್ಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಘೋಷಿಸುವ ಭರವಸೆ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ರಾತ್ರಿ ಪಾಳಯದಲ್ಲಿ ಅರಣ್ಯದಲ್ಲಿನ ಕಾಡು ಮೃಗಗಳ ನಡುವೆ ಜೀವ ಹಿಡಿದು ಹೋರಾಡುವ ಇಂತಹ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ರಕ್ಷಣೆಗೂ ಒಂದು ಅಸ್ತ್ರ ಇಲ್ಲದಿರುವುದು ನಾಗರಿಕ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಿದೆ.