ಮಂಗಳೂರು:ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಗಂಡನನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದ ಪತ್ನಿಸಹಿತ ಐವರ ವಿರುದ್ಧದ ಆರೋಪ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಪಾವೂರು ಇನೋಳಿ ದೆಂಡಿಂಜೆ ನಿವಾಸಿ ಇಸ್ಮಾಯಿಲ್ (59) ಕೊಲೆಯಾದವರು.
ಮೂಲತಃ ಉಳ್ಳಾಲ ದರ್ಗಾ ಸಮೀಪ, ಪ್ರಸ್ತುತ ಬಿ.ಸಿ.ರೋಡ್ ನಿವಾಸಿ ಅಬ್ದುಲ್ ಮುನಾಫ್ ಯಾನೆ ಮುನ್ನ(41), ಉಳ್ಳಾಲ್ ನಿವಾಸಿ ಅಬ್ದುಲ್ ರಹ್ಮಾನ್ (36), ಬೋಳಿಯಾರು ನಿವಾಸಿ ಶಬೀರ್ ಯಾನೆ ಶಬ್ಬಿ(31), ಕುತ್ತಾರ್‌ಪದವು ನಿವಾಸಿ ಜಮಾಲ್ ಅಹಮದ್ (38), ಪಾವೂರು ನೆಬಿಸಾ(40) ಶಿಕ್ಷೆಗೊಳಗಾದ ಅಪರಾಧಿಗಳು.
ಪ್ರಕರಣದ ಹಿನ್ನೆಲೆ:ಪಾವೂರು ನಿವಾಸಿ ಇಸ್ಮಾಯಿಲ್ ಎಂಬವರಿಗೆ ನೆಬಿಸಾ ಜೊತೆ ಎರಡನೇ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು. ಇಸ್ಮಾಯಿಲ್ ಮೂರು ಬಾಡಿಗೆ ವಾಹನಗಳ ಮಾಲೀಕನಾಗಿದ್ದರೆ, ನೆಬಿಸಾ ಗೃಹಿಣಿ. ನೆಬಿಸಾಗೆ ಬೇರೊಂದು ಅಕ್ರಮ ಸಂಬಂಧವಿದ್ದು, ಇದೇ ವಿಚಾರದಲ್ಲಿ ಇಸ್ಮಾಯಿಲ್ ಮತ್ತು ನೆಬಿಸಾ ಮಧ್ಯೆ ಜಗಳವಾಗುತ್ತಿತ್ತು. ಹೀಗಾಗಿ ನೆಬಿಸಾ ಅಪರಾಧಿ ಜಮಾಲ್ ಜೊತೆ ಸೇರಿ ಗಂಡ ಇಸ್ಮಾಯಿಲ್‌ನನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಗಂಡನ ಕೊಲೆ ಮಾಡಿದರೆ 2.50 ಲಕ್ಷ ರೂ. ಸುಪಾರಿ ನೀಡುವುದಾಗಿ ವಾಗ್ದಾನ ಮಾಡಿದ್ದಳು.
ಸುಪಾರಿಗಾಗಿ ಅಪರಾಧಿಗಳು ನೆಬಿಸಾ ಪತಿ ಇಸ್ಮಾಯಿಲ್‌ನನ್ನು 2016ರ ಫೆ.16ರಂದು ಬಾಡಿಗೆ ನೆಪದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ, ಮದ್ಯಪಾನ ಮಾಡಿಸಿ ಶಿರಾಡಿಯತ್ತ ತೆರಳಿದ್ದಾರೆ. ಶಿರಾಡಿ ರಕ್ಷಿತಾರಣ್ಯದ ಕೆಂಪುಹೊಳೆ ಸಮೀಪ ತಲುಪಿದಾಗ ವಾಹನ ಕೆಟ್ಟುಹೋಗುತ್ತದೆ. ಈ ಸಂದರ್ಭದಲ್ಲಿ ವಾಹನದಿಂದ ಇಳಿದ ಆರೋಪಿಗಳು ಇಸ್ಮಾಯಿಲ್‌ನನ್ನು ರಕ್ಷಿತಾರಣ್ಯದೊಳಗೆ ಕರೆದೊಯ್ದು ಚೂರಿಯಿಂದ ಇರಿದು ಕೊಲೆ ಮಾಡಿ, ಬಟ್ಟೆಯನ್ನು ತೆಗೆದು ಕಾಡಿನ ತಗ್ಗು ಪ್ರದೇಶದಲ್ಲಿಟ್ಟು, ತರಗೆಲೆಗಳನ್ನು ಮುಚ್ಚಿ ಹಾಕುತ್ತಾರೆ. ಬಳಿಕ ವಾಹನವನ್ನು ರಿಪೇರಿ ಮಾಡಿ ಉಪ್ಪಿನಂಗಡಿಯಲ್ಲಿ ನಿಲ್ಲಿಸಿ, ಇಸ್ಮಾಯಿಲ್‌ನ ರಕ್ತದ ಕಲೆಯಿರುವ ಬಟ್ಟೆ, ಮೊಬೈಲ್‌ಗಳನ್ನು ಉಳ್ಳಾಲ ನೇತ್ರಾವತಿ ನದಿಗೆ ಎಸೆಯುತ್ತಾರೆ.
ಇದಾದ ನಂತರ ನೆಬಿಸಾ ಆರೋಪಿಗಳಿಗೆ 2.50 ಲಕ್ಷ ರೂ.ನೀಡಲು ಚಿನ್ನಾಭರಣಗಳನ್ನು ಅಡವಿಟ್ಟಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಹಾಗೆಯೇ ನೆಬಿಸಾ ತನ್ನ ಮೇಲೆ ಅನುಮಾನ ಬಾರದಿರಲೆಂದು 2016ರ ಫೆ.17ರಂದು ಗಂಡ ನಾಪತ್ತೆಯಾಗಿರುವ ಬಗ್ಗೆ ತೊಕ್ಕೊಟ್ಟು ಪೊಲೀಸರಿಗೆ ದೂರು ನೀಡುತ್ತಾಳೆ. ಈ ಮಧ್ಯೆ ಇಸ್ಮಾಯಿಲ್‌ನ 1ನೇ ಹೆಂಡತಿಯ ಮಗನಿಗೆ ಉಪ್ಪಿನಗಂಡಿಯಲ್ಲಿ ಬಿಟ್ಟು ಬಂದ ವಾಹನದಲ್ಲಿ ರಕ್ತದ ಕಲೆಗಳು ಕಾಣುತ್ತವೆ. ತಕ್ಷಣ ಚಿಕ್ಕಮ್ಮ ನೆಬಿಸಾ ವಿರುದ್ಧ ಅನುಮಾನದಿಂದ ಫೆ.18ರಂದು ಪೊಲೀಸರಿಗೆ ದೂರು ನೀಡಿದ್ದು, ಈ ಆಯಾಮದಲ್ಲಿ ತನಿಖೆ ನಡೆದಾಗ ಸತ್ಯಾಂಶ ಬಯಲಿಗೆ ಬಂದಿದೆ.
ಇದನ್ನೂ ಓದಿ:ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ - Bengaluru Murder Case