ಕರ್ನಾಟಕ

karnataka

ETV Bharat / state

ಒಂದು ರಾಷ್ಟ್ರ, ಒಂದು ಚುನಾವಣೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್ - One Nation One Election - ONE NATION ONE ELECTION

'ಒಂದು ರಾಷ್ಟ್ರ, ಒಂದು ಚುನಾವಣೆ'ಗೆ ಡಿಸಿಎಂ ಡಿ.ಕೆ.ಶಿವಕುಮಾರ್​ ವಿರೋಧ ವ್ಯಕ್ತಪಡಿಸಿದ್ದು, ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

By ETV Bharat Karnataka Team

Published : Sep 19, 2024, 8:34 AM IST

ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ (ETV Bharat)

ಬೆಂಗಳೂರು: "ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಆಪರೇಷನ್ ಕಮಲಕ್ಕೆ ಮೂಲದಾತರುಗಳಾದ ಬಿಜೆಪಿಯವರೇ ಒಂದು ರಾಷ್ಟ, ಒಂದು ಚುನಾವಣೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಕುಮಾರಪಾರ್ಕ್​ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅನೇಕ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಪ್ರಾದೇಶಿಕ ಪಕ್ಷಗಳು ಬೆಳೆಯುತ್ತಿರುವುದನ್ನು ತಡೆಯಲು ಕೇಂದ್ರ ಸರ್ಕಾರ ಈ ಹುನ್ನಾರ ಮಾಡಿದೆ. ದೇಶದಲ್ಲಿ ಎಲ್ಲಾ ಪಕ್ಷಗಳಿಗೂ ಅವಕಾಶ ಸಿಗಬೇಕು. ಈ ಹಿಂದೆಯೂ ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ನಮ್ಮಲ್ಲಿತ್ತು. ನಮ್ಮ ರಾಜ್ಯದಲ್ಲಿಯೂ ಒಟ್ಟಿಗೆ ಚುನಾವಣೆ ಮಾಡಲಾಯಿತು. ಆನಂತರ ಸಾಧ್ಯವಾಯಿತೇ? ಆಗಲಿಲ್ಲ. ಏಕೆಂದರೆ ಒಂದಷ್ಟು ಸರ್ಕಾರಗಳು ಕ್ಯಾಬಿನೆಟ್​ನಲ್ಲಿ 6 ಹಾಗೂ 3 ತಿಂಗಳು ಮುಂಚಿತವಾಗಿ ಚುನಾವಣೆಗೆ ಹೋಗುತ್ತೇವೆ ಎಂದರು. ಒಂದಷ್ಟು ರಾಜ್ಯಗಳಲ್ಲಿ ಸರ್ಕಾರಗಳೇ ವಿಸರ್ಜನೆಗೊಂಡವು. ಹೀಗಿರುವಾಗ ಈ ವ್ಯವಸ್ಥೆಯನ್ನು ಜಾರಿಗೆ ತರಲು ಹೇಗೆ ಸಾಧ್ಯ?" ಎಂದು ಹೇಳಿದರು.

"ಬಿಜೆಪಿ ಈ ಪ್ರಯತ್ನ ಮಾಡುತ್ತಿರುವುದು ಸರಿಯಿಲ್ಲ. ಅಲ್ಲದೇ ಮೂರನೇ ಒಂದರಷ್ಟು ಬಹುಮತವೂ ಅವರಿಗಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಒಮ್ಮತದ ಅಭಿಪ್ರಾಯ ಕೇಳಲಿ. ಇದರ ಹೊರತು ಇಂತಹ ಪ್ರಸ್ತಾವನೆಗಳು ವ್ಯರ್ಥ. ಮೊದಲು ಮಹಿಳಾ ಮೀಸಲಾತಿ ಬಗ್ಗೆ ಕ್ರಮ ತೆಗೆದುಕೊಳ್ಳಲಿ. ಕ್ಷೇತ್ರ ವಿಂಗಡಣೆಗೆ ಕ್ರಮ ತೆಗೆದುಕೊಳ್ಳಲಿ. ಒಂದು ಚುನಾವಣೆ ವಿಚಾರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಲೋಕಸಭಾ ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಅರ್ಥಪೂರ್ಣವಾದ ಮಾತಿಗೆ ನಮ್ಮ ಒಮ್ಮತದ ಒಪ್ಪಿಗೆ ಇದೆ" ಎಂದು ತಿಳಿಸಿದರು.

ಒಕ್ಕಲಿಗ ನಾಯಕರ ನಿಯೋಗದ ಭೇಟಿಗೆ ಸಮಯ:ಮುನಿರತ್ನ ವಿಚಾರವಾಗಿ ಒಕ್ಕಲಿಗ ನಾಯಕರ ನಿಯೋಗದ ಭೇಟಿ ಬಗ್ಗೆ ಕೇಳಿದಾಗ, "ಒಕ್ಕಲಿಗ ನಾಯಕರ ನಿಯೋಗದ ಭೇಟಿಗೆ ಗುರುವಾರ (ಸೆ.19) ಸಂಜೆ ಸಮಯ ನೀಡಿದ್ದೇನೆ. ಈ ವಿಚಾರವಾಗಿ ಅಶೋಕ್​ ಹಾಗೂ ಬೇರೆಯವರ ನುಡಿಮುತ್ತುಗಳನ್ನು ತಾವೆಲ್ಲಾ ಗಮನಿಸಿದ್ದೀರಿ. ಇದರ ಬಗ್ಗೆ ಆನಂತರ ಮಾತನಾಡುತ್ತೇನೆ" ಎಂದು ಹೇಳಿದರು.

ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್: ದೇವೇಗೌಡರೇ ಒಕ್ಕಲಿಗರ ಸರ್ವೋಚ್ಚ ನಾಯಕ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ "ದೇಶದ ಪ್ರಧಾನಿಗಳಾಗಿದ್ದ ದೇವೇಗೌಡರನ್ನು ಸರ್ವೋಚ್ಚ ನಾಯಕರಲ್ಲ ಎಂದು ನಾವು ಹೇಳಿಲ್ಲ. ಅವರನ್ನು ನಾವು ನಾಯಕರಲ್ಲ ಎಂದು ಹೇಳಲು ಸಾಧ್ಯವೇ?. ದೇವೇಗೌಡರನ್ನು ದೇಶದ ಪ್ರಧಾನಿಗಳನ್ನಾಗಿ ಮಾಡಿದ್ದೇ ಕಾಂಗ್ರೆಸ್​ ಪಕ್ಷ. ಬಿಜೆಪಿ ಅವರಿಗೆ ಸ್ಥಾನ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನೀಡದೇ ಇದ್ದಾಗ ಯಡಿಯೂರಪ್ಪನವರು, ಆರ್.ಅಶೋಕ್ ಏನೇನು ಮಾತನಾಡಿದ್ದರು?. ಸುಮ್ಮನೆ ಸಮಯಕ್ಕೆ ತಕ್ಕಂತೆ ಮಾತನಾಡುವುದಲ್ಲ ಎಂದು ಟಾಂಗ್ ಕೊಟ್ಟರು.

ಡಿ.ಕೆ.ಸಹೋದರರು ಮುನಿರತ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ, "ಹಾಗಾದರೆ ನಾವು ಹೇಳಿಕ್ಕೊಟ್ಟಂತೆ ಅವರು (ಮುನಿರತ್ನ) ಡೈಲಾಗ್ ಹೊಡೆಯುತ್ತಿದ್ದಾರಾ?. ಅವರ ಮಾತುಗಳನ್ನು ನಾನು ನೋಡಿದೆ, ಸ್ವಾಮೀಜಿಗಳು ನೋಡಿದ್ದಾರಂತೆ. ಹೀಗೆ ಮಾತನಾಡು ಎಂದು ನಾವು ಅವರಿಗೆ ಹೇಳಿಕೊಟ್ಟಿದ್ದೇವೆಯೇ?. ಇಲ್ಲಿ ಡೈಲಾಗ್ ನಿರ್ದೇಶಕರು, ನಿರ್ಮಾಪಕರು ಯಾರಿದ್ದಾರೆ?. ಎಲ್ಲರೂ ಅವರ ಜೊತೆಯಲ್ಲೇ ಇದ್ದಾರೆ ಎಂದು ತಿರುಗೇಟು ನೀಡಿದರು.

ಒಂದು ರಾಷ್ಟ್ರ, ಒಂದು ಚುನಾವಣೆಗೆ ಜೆಡಿಎಸ್ ಬೆಂಬಲ- ಹೆಚ್‌ಡಿಕೆ: ಒಂದು ರಾಷ್ಟ್ರ, ಒಂದು ಚುನಾವಣೆಯ ಮೂಲಕ ಭಾರತೀಯ ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇರಿಸಿರುವ ಹೆಜ್ಜೆ ಐತಿಹಾಸಿಕ ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಣ್ಣಿಸಿದ್ದಾರೆ. ಒಂದು ರಾಷ್ಟ್ರ, ಒಂದು ಚುನಾವಣೆಯನ್ನು ಜೆಡಿಎಸ್ ಪಕ್ಷ ಸ್ವಾಗತಿಸುತ್ತದೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ನವದೆಹಲಿಯ ಭಾರತ್​ ಮಂಟಪದಲ್ಲಿ ಕೈಗಾರಿಕಾ ಸಚಿವಾಲಯ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ಕುರಿತ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

"ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ವರದಿ ನೀಡಿದೆ. ಈ ವರದಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ನರೇಂದ್ರ ಮೋದಿ ಅವರ ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆಯೇ ಸಂಪುಟವು ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ" ಎಂದು ಅವರು ಸರ್ಕಾರವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ:ಒಂದು ದೇಶ, ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಿಎಂ ಸಿದ್ದರಾಮಯ್ಯ - One country one election

ABOUT THE AUTHOR

...view details