ಬೆಂಗಳೂರು:''ರೈತರು ಮತ್ತು ತುಂಗಭದ್ರಾ ಅಣೆಕಟ್ಟಿನ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ'' ಎಂದುಜಲಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಲು ತೆರಳುವ ಮುನ್ನ ಸದಾಶಿವನಗರ ನಿವಾಸದ ಬಳಿ ಅವರು ಮಾತನಾಡಿದರು. ''ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟಿನ ಚೈನ್ ಲಿಂಕ್ ಕಟ್ ಆಗಿದ್ದು, ನೀರು ಬಹಳ ರಭಸವಾಗಿ ಹೋಗುತ್ತಿದೆ. ಇಲಾಖೆಯು ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದೆ. ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ತಜ್ಞರನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿರುವವರು ಬಹಳ ಹುಷಾರಾಗಿರುವಂತೆ ಸೂಚನೆ ನೀಡಲಾಗಿದೆ'' ಎಂದು ತಿಳಿಸಿದರು.
''ನೀರು ಬಿಡುಗಡೆ ಮಾಡದೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ದುರಸ್ತಿ ಮಾಡಲಾಗುವುದಿಲ್ಲ ಎಂಬ ಅಭಿಪ್ರಾಯ ಇದೆ. ತಜ್ಞರ ಸಮಿತಿ ಏನು ಶಿಫಾರಸು ಮಾಡುತ್ತೆದೆಯೋ, ಅದರ ಪ್ರಕಾರ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲಾ ಮುಂಜಾಗ್ರತಾ ಕ್ರಮ ತೆಗದುಕೊಂಡಿದ್ದೇವೆ. ಸದ್ಯ ಜಲಾಶಯದ ಎಲ್ಲಾ ಗೇಟ್ ತೆರದಿದ್ದೇವೆ. ಸದ್ಯ 60 ಟಿಎಂಸಿಯಷ್ಟು ನೀರು ಇದೆ. ಇದು ಅತಿ ದೊಡ್ಡ ಅಣೆಕಟ್ಟಾಗಿದೆ. ಮೂರು ರಾಜ್ಯಗಳಿಗೆ ಸಂಬಂದ ಪಟ್ಟ ಜಲಾಶಯವಾಗಿದೆ. ಅಣೆಕಟ್ಟಿನ ಸುರಕ್ಷತೆಗೆ ಏನು ಮಾಡಬೇಕು ಅದನ್ನೆಲ್ಲಾ ಮಾಡುತ್ತಿದ್ದೇವೆ. ಈ ಸಂಬಂಧ ಬೇರೆ ಬೇರೆ ಕಡೆಯಿಂದ ತಜ್ಞರನ್ನು ಕರೆಸಿದ್ದೇವೆ'' ಎಂದು ವಿವರಿಸಿದರು.