ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ (ETV Bharat) ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಎರಡೂ ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದರು.
ಪ್ರಕರಣ ದಾಖಲಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ವಿಚಾರಣೆ ಎದುರಿಸಿದರು. ವಿಚಾರಣೆ ಮುಕ್ತಾಯವಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, "ಬುಧವಾರ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆಲಮಟ್ಟಿ ಜಲಾಶಯ ಬಾಗಿನ ಅರ್ಪಣೆ ಹಿನ್ನೆಲೆಯಲ್ಲಿ ಸಮಯಾವಕಾಶ ಪಡೆದು ಇಂದು ವಿಚಾರಣೆ ಎದುರಿಸಿದ್ದೇನೆ. ಲೋಕಾಯುಕ್ತ ಅಧಿಕಾರಿಗಳು ಎರಡ್ಮೂರು ಗಂಟೆ ವಿಚಾರಣೆ ಮಾಡಿದರು. ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಕರೆದು ಏನೇನೋ ಪ್ರಶ್ನೆ ಕೇಳಿ ಹಿಂಸೆ ಕೊಟ್ಟಿದ್ದಾರೆ. ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಕೆಲ ಪ್ರಶ್ನೆಗಳಿಗೆ ದಾಖಲೆ ರೂಪದಲ್ಲಿ ಉತ್ತರಿಸುವುದಾಗಿ ತಿಳಿಸಿದ್ದೇನೆ. ವಿಚಾರಣೆಗೆ ಕರೆದಾಗ ಬರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಿಗಿಂತ (ಲೋಕಾಯುಕ್ತ ಇಲಾಖೆ) ಸಿಬಿಐನವರೇ ಪರವಾಗಿಲ್ಲ. ಏಕೆಂದರೆ ಆರೋಪ ಸಂಬಂಧ ಸಿಬಿಐ ಅಧಿಕಾರಿಗಳು ಒಂದು ದಿನವೂ ವಿಚಾರಣೆಗೆ ಕರೆದಿಲ್ಲ, ಪ್ರಶ್ನೆ ಕೇಳಿಲ್ಲ" ಎಂದು ಪ್ರತಿಕ್ರಿಯಿಸಿದರು.
ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಡಿ.ಕೆ.ಶಿವಕುಮಾರ್ ಮನೆ ಹಾಗೂ ಕಚೇರಿಗಳ ಮೇಲೆ 2017ರಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಇ.ಡಿ.ಅಧಿಕಾರಿಗಳು ಬಂಧಿಸಿದ್ದರು. 2019ರಲ್ಲಿ ಇ.ಡಿ. ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸಿಬಿಐ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು. ಅಂದಿನ ರಾಜ್ಯ ಬಿಜೆಪಿ ಸರ್ಕಾರ ಸಿಬಿಐಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಸಿಬಿಐಗೆ ನೀಡಿದ್ದ ಅನುಮತಿ ರದ್ದುಪಡಿಸಿ ಆದೇಶಿಸಿತ್ತು.
ಲೋಕಾಯುಕ್ತಕ್ಕೆ ಇನ್ನೂ ವರ್ಗಾವಣೆಯಾಗದ ಕೇಸ್ ಫೈಲ್:ಸಿಬಿಐಗೆ ನೀಡಿರುವುದನ್ನು ರಾಜ್ಯ ಸರ್ಕಾರ ಹಿಂಪಡೆದು ಲೋಕಾಯುಕ್ತ ಸಂಸ್ಥೆಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಕೋರ್ಟ್ ಮೆಟ್ಟಿಲೇರಿದೆ. ಮತ್ತೊಂದೆಡೆ ಲೋಕಾಯುಕ್ತ ಅಧಿಕಾರಿಗಳು, ಸಿಬಿಐನಿಂದ ಪ್ರಕರಣ ಕಡತ ವರ್ಗಾವಣೆ ಮಾಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಂದಿನ ವಾರದೊಳಗೆ ಈ ಬಗ್ಗೆ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಇದನ್ನೂ ಓದಿ:ಪ್ರಾಸಿಕ್ಯೂಷನ್‌ಗೆ ಬಾಕಿ ಇರುವ ಕೇಸುಗಳ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ಸಂಪುಟ ಸಭೆ ನಿರ್ಧಾರ - Cabinet Meeting Decisions