ಬೆಂಗಳೂರು: ಸಿ.ಟಿ.ರವಿ ಏನು ಬೇಕಾದರು ಆರೋಪ ಮಾಡುತ್ತಾರೆ. ಆರೋಪ ಮಾಡುವುದರಲ್ಲಿ ಮತ್ತು ಮಾತು ತಿರುಚುವುದರಲ್ಲಿ ಅವರು ಎಕ್ಸ್ಪರ್ಟ್ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಅಂದಿದ್ದೂ ಆಯ್ತು. ಇವರನ್ನು ಕೊಲೆಗಡುಕ ಅಂದಿದ್ದೂ ಆಯ್ತು. ಅವರು ಮತ್ತೊಂದು ಪದ ಬಳಕೆ ಮಾಡಿದ್ದೂ ಆಯ್ತು. ನೀವು ಅದು ಯಾವುದನ್ನೂ ಖಂಡಿಸುತ್ತಾ ಇಲ್ಲ. ನೀವು ಚರ್ಚೆ ಮಾಡುತ್ತಿರುವುದು ಸಿ.ಟಿ.ರವಿ ಅರೆಸ್ಟ್ ಮಾಡಿರುವುದನ್ನು ಎಂದರು.
ಗೌರವಯುತವಾಗಿ ಆಗಿರುವ ತಪ್ಪಿಗೆ ರಾಜ್ಯದ ಮಹಿಳೆಯರ ಕ್ಷಮೆ ಕೇಳುವುದು ಒಳಿತು ಅನ್ನೋದು ನನ್ನ ಭಾವನೆ. ಅವರ ಮನೆಯಲ್ಲೂ ಮಹಿಳೆಯರಿದ್ದಾರೆ. ಬಿಜೆಪಿಯಲ್ಲಿ ಲಂಗುಲಗಾಮು ಇಲ್ಲ ಅನ್ಸುತ್ತೆ. ಅದಕ್ಕೋಸ್ಕರ ಈ ರೀತಿ ಹೇಳಿಕೆಗಳು ಪದೇ ಪದೆ ಬರುತ್ತದೆ. ನಡೆದ ಘಟನೆ ಬಿಜೆಪಿಗೆ ಶೋಭೆ ತರುತ್ತಾ?. ಆರ್ಎಸ್ಎಸ್ ಹೇಳಿದ ಸಂಸ್ಕೃತಿ ಇದೇನಾ?. ಏಕೆ ಪದೇ ಪದೆ ಬಿಜೆಪಿ ನಾಯಕರು ಈ ರೀತಿ ಹೆಣ್ಣು ಮಕ್ಕಳ ಮೇಲೆ ಮತ್ತು ಹೆಣ್ಣು ಮಕ್ಕಳ ಜೊತೆ ನಡೆದುಕೊಳ್ಳುವ ರೀತಿ ನೀತಿಗಳನ್ನು ಜನರು ಗಮನಿಸಬೇಕು ಎಂದರು.
ಬಿಜೆಪಿ ನಾಯಕರು ಪದೇ ಪದೆ ಹೆಣ್ಣು ಮಕ್ಕಳ ಮೇಲೆ ತೋರಿಸುವ ನಡವಳಿಕೆ ನೋಡಿದರೆ ಬಹುಶಃ ಅವರ ಮನೆಯಲ್ಲಿ ಅವರ ತಾಯಿ, ಹೆಂಡತಿ ಮತ್ತು ಹೆಣ್ಣು ಮಕ್ಕಳಿಗೂ ಗೌರವ ಕೊಡಲ್ಲ ಅಂತ ಕಾಣಿಸುತ್ತೆ. ಈಗಾಲಾದರು ಅವರಿಗೆ ಕಡಿವಾಣ ಹಾಕಬೇಕು. ಒಬ್ಬನೇ ಒಬ್ಬ ನಾಯಕ ಈ ಹೇಳಿಕೆಯನ್ನು ಖಂಡಿಸಲು ಬಿಜೆಪಿಯವರಲ್ಲಿ ಮಾತುಗಳು ಇಲ್ಲ. ರಾಜ್ಯದ ಜನಪ್ರತಿನಿಧಿಗಳು ಈ ರೀತಿ ಮಾತನಾಡಿರುವುದಕ್ಕೆ ಕ್ಷಮೆಯಾಚಿಸುವ ಸೌಜನ್ಯವೂ ಆ ನಾಯಕನಿಗೆ ಇಲ್ಲ ಎಂದು ಟೀಕಿಸಿದರು.