ಕರ್ನಾಟಕ

karnataka

ETV Bharat / state

ಪರಪ್ಪನ ಅಗ್ರಹಾರ ಸೆರೆಮನೆಯೇ ಅಥವಾ ಅರಮನೆಯೇ?: ಎನ್.ರವಿಕುಮಾರ್ ಪ್ರಶ್ನೆ - Parappan Agrahara - PARAPPAN AGRAHARA

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ, ರಾಜಾತಿಥ್ಯ ವ್ಯವಸ್ಥೆಯನ್ನು ಅಲ್ಲಿನ ಜೈಲಿನ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಲ್ಪಿಸಿಕೊಟ್ಟಿರುವುದು ತೀವ್ರ ಖಂಡನೀಯ ಎಂದು ಎನ್ ರವಿಕುಮಾರ್ ತಿಳಿಸಿದ್ದಾರೆ.

ಎನ್.ರವಿಕುಮಾರ್
ಎನ್.ರವಿಕುಮಾರ್ (ETV Bharat)

By ETV Bharat Karnataka Team

Published : Aug 26, 2024, 7:01 AM IST

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ರಾಜಾತಿಥ್ಯ ಕಲ್ಪಿಸಿದ್ದು, ಪರಪ್ಪನ ಅಗ್ರಹಾರ ಸೆರೆಮನೆಯೇ ಅಥವಾ ಅರಮನೆಯೇ ಎಂಬುದನ್ನು ಗೃಹ ಇಲಾಖೆ ಮತ್ತು ಗೃಹ ಸಚಿವರು ನಾಡಿನ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದ ಆರೋಪಿ ದರ್ಶನ್​​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ, ರಾಜಾತಿಥ್ಯ ವ್ಯವಸ್ಥೆಯನ್ನು ಅಲ್ಲಿನ ಜೈಲಿನ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಲ್ಪಿಸಿಕೊಟ್ಟಿರುವುದು ತೀವ್ರ ಖಂಡನೀಯ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಮಾವಧಿ ಎಂದು ರವಿಕುಮಾರ್ ಟೀಕಿಸಿದ್ದಾರೆ.

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಪ್ರಕರಣದ ವೈಫಲ್ಯವೇ ಎತ್ತಿ ತೋರಿಸುತ್ತದೆ. ಈ ಪ್ರಕರಣದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಈ ಐಷಾರಾಮಿ ವ್ಯವಸ್ಥೆಯನ್ನು ನೋಡಿದರೆ ಅಲ್ಲಿನ ಸಂಬಂಧಪಟ್ಟ ಜೈಲಿನ ಅಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿ ಆರೋಪಿಗಳ ಜೊತೆ ಶಾಮೀಲಾಗಿರುವುದು ಗೋಚರಿಸುತ್ತದೆ. ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ಕುಳಿತುಕೊಳ್ಳಲು ಕುರ್ಚಿ, ಟೇಬಲ್, ಕಾಫಿ - ಟೀ ಜೊತೆಗೆ ಸಿಗರೇಟ್ ಸೇರಿದಂತೆ ಎಲ್ಲ ಐಷಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದು ಸರಿಯಲ್ಲ; ಇದು ಖಂಡನೀಯ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಆರೋಪಿ ದರ್ಶನ್​​ ಮನೆ ಊಟ ಬೇಡಿಕೆಯಿಟ್ಟಿರುವುದು ಮೇಲ್ನೋಟಕ್ಕೆ ಕಣ್ಣೊರೆಸುವ ರೀತಿ ಕಾಣುತ್ತದೆ. ಆದರೆ, ಆರೋಪಿಗಳಿಗೆ ಜೈಲಿನಲ್ಲೇ ಎಲ್ಲಾ ರೀತಿಯ ಸಕಲ ಸೌಲಭ್ಯ ಒದಗಿಸುತ್ತಿರುವುದು ದುರಂತ, ಆರೋಪಿ ದರ್ಶನ್​ಗೆ ಕಾಫಿ-ಟೀ, ಸಿಗರೇಟ್ ಜೊತೆಗೆ ಇನ್ನು ಏನೇನು ಯಾವ ಯಾವ ಪದಾರ್ಥಗಳು, ವಸ್ತುಗಳು ಜೈಲಿನ ಒಳಗಡೆ ಸರಬರಾಜು ಆಗುತ್ತಿದೆ ಎನ್ನುವುದು ಊಹೆ ಮಾಡಲು ಸಾಧ್ಯವಾಗುತ್ತಿಲ್ಲ, ಈ ಐಷಾರಾಮಿ ವ್ಯವಸ್ಥೆ ನೋಡಿದರೆ ಮೃತ ರೇಣುಕಾಸ್ವಾಮಿ ಅವರ ತಂದೆ ತಾಯಿ ಹಾಗೂ ಇಡೀ ನಾಡಿನ ಜನತೆಗೆ ಇದು ಯಾವ ರೀತಿ ಸಂದೇಶ ಹೋಗುತ್ತಿದೆ ಎನ್ನುವುದು ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗಿದೆ. ಆದ್ದರಿಂದ, ಈ ಬಗ್ಗೆ ಸರ್ಕಾರ ತಕ್ಷಣವೇ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕು ಎಂದು ಮುಂಬರುವ ದಿನಗಳಲ್ಲಿ ಈ ರೀತಿಯ ಘಟನೆಗಳು ಜೈಲಿನಲ್ಲಿ ನಡೆಯಬಾರದು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಫೋಟೋ ವೈರಲ್ ಆದ ಬೆನ್ನಲ್ಲೇ ಬಿಜೆಪಿ ನಾಯಕರು, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ವೀಕ್ ಡೇನಲ್ಲಿ ಕೆಎಎಸ್ ಪರೀಕ್ಷೆಗೆ ವಿರೋಧ: ರಾಜಭವನದ ಕದ ತಟ್ಟಿದ ಬಿಜೆಪಿ - KAS Exam

ABOUT THE AUTHOR

...view details