ಕರ್ನಾಟಕ

karnataka

ETV Bharat / state

ಆಶಾ ಕಾರ್ಯಕರ್ತೆಯರ ಪ್ರತಿಭಟನೆ; ನಿಗದಿತ ವೇತನ, ಪ್ರೋತ್ಸಾಹ ಧನಕ್ಕೆ ಆಗ್ರಹ - ASHA WORKERS PROTEST

ನಗರದ ಫ್ರೀಡಂ ಪಾರ್ಕ್​ನಲ್ಲಿ ನಿಗದಿತ ವೇತನ ಹಾಗೂ ಪ್ರೋತ್ಸಾಹ ಧನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.

asha-workers-conduct-protest
ಆಶಾ ಕಾರ್ಯಕರ್ತೆಯರ ಪ್ರತಿಭಟನೆ (ETV Bharat)

By ETV Bharat Karnataka Team

Published : Jan 7, 2025, 3:42 PM IST

ಬೆಂಗಳೂರು : ನಿಗದಿತ ವೇತನ, ಸರ್ಕಾರದಿಂದ ಪ್ರೋತ್ಸಾಹ ಧನಕ್ಕೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ‌. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯದಲ್ಲಿರುವ 42,000 ಜನ ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಹಲವು ವರ್ಷಗಳಿಂದ ಈಡೇರಿಲ್ಲ. ಆದ್ದರಿಂದ ಕೆಲಸ ಸ್ಥಗಿತಗೊಳಿಸಿ ಧರಣಿಗೆ ನಿರ್ಧರಿಸಿದ್ದೇವೆ ಎಂದು ಪ್ರತಿಭಟನಾ ನಿರತರು ತಿಳಿಸಿದರು.

ಬೇಡಿಕೆಗಳೇನು?ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಗೌರವಧನ ನೀಡಬೇಕು. ನಗರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸ ಹಾಗೂ ನಗರದ ದುಬಾರಿ ಜೀವನ ವೆಚ್ಚಗಳಿಗೆ ಅನುಗುಣವಾಗಿ 20 ಸಾವಿರ ರೂ. ಗೌರವಧನ ಹೆಚ್ಚಿಸಬೇಕು.

ಆಶಾ ಯುನಿಯೂನ್​ ಸ್ಟೇಟ್​ ವೈಸ್​ ಪ್ರೆಸಿಡೆಂಟ್​ ಡಾ. ಪ್ರಮೋದ್ ಮಾತನಾಡಿದರು (ETV Bharat)

8 ವರ್ಷಗಳಿಂದಲೂ ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಕೆಲಸಗಳು ಆಶಾ ನಿಧಿ ಪೋರ್ಟಲ್‌ನಲ್ಲಿ ದಾಖಲಾಗುತ್ತಿಲ್ಲ. ರಾಜ್ಯಾದ್ಯಂತ ಬಾಕಿ ಇರುವ 3 ತಿಂಗಳ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಆಶಾ ಕಾರ್ಯಕರ್ತೆಯರಿಗೆ ವಹಿಸಿರುವ ಮೊಬೈಲ್ ಆಧಾರಿತ ಕೆಲಸಗಳನ್ನ ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳಬಾರದು. ಇಲ್ಲದಿದ್ದರೆ ಮೊಬೈಲ್‌ ಆಧಾರಿತ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಲ್ಲಿ ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ರೂ.5 ಲಕ್ಷ ನೀಡಬೇಕು. ಪ್ರತಿವರ್ಷ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಬೇಕು. ಆಶಾ ಕಾರ್ಯಕರ್ತೆಯರನ್ನ ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಭವಿಷ್ಯನಿಧಿ, ಕಾರ್ಮಿಕರ ರಾಜ್ಯ ವಿಮೆ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.

ಹಿಂದೆ ನೀಡಿದ್ದ ಭರವಸೆಗಳನ್ನು ಸಿಎಂ ಸಿದ್ದರಾಮಯ್ಯ ಈಡೇರಿಸಿಲ್ಲ: ಈ ಬಗ್ಗೆ ಆಶಾ ಯುನಿಯೂನ್​ ರಾಜ್ಯ ಉಪಾಧ್ಯಕ್ಷ ಡಾ. ಪ್ರಮೋದ್​ ಮಾತನಾಡಿ, ''ಕಳೆದ ಫೆಬ್ರವರಿಯಲ್ಲಿ ಇದೇ ರೀತಿ ಪ್ರತಿಭಟನೆ ನಡೆಸಲಾಗಿತ್ತು. ಆಗ ಸಿಎಂ ಸಿದ್ದರಾಮಯ್ಯ ಅವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. 8 ರಿಂದ 9 ತಿಂಗಳು ಕಾದರೂ ಏನೂ ಬದಲಾವಣೆ ಆಗಿಲ್ಲ. 15 ಮೀಟಿಂಗ್​ಗಳು ನಡೆದಿದ್ದರೂ, ಏನೂ ಪ್ರಯೋಜನ ಕೂಡ ಆಗಿಲ್ಲ. ಅನಿವಾರ್ಯವಾಗಿ ನಾವು ಇವತ್ತು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಬಂದಿದ್ದೇವೆ. ಸರ್ಕಾರದಿಂದ ನಮಗೆ ಸೂಕ್ತ ಭರವಸೆ ಸಿಗುವವರೆಗೂ ನಾವು ಇದನ್ನ ಕೈಬಿಡಲ್ಲ'' ಎಂದು ಹೇಳಿದರು.

ಇದನ್ನೂ ಓದಿ :ಮೂರ್ನಾಲ್ಕು ತಿಂಗಳಿಂದ ಸಿಗದ ಸಂಬಳ: ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಸಿಡಿದೆದ್ದ ಆಶಾ ಕಾರ್ಯಕರ್ತೆಯರು - Asha workers protest against govt

ABOUT THE AUTHOR

...view details