ಬೆಂಗಳೂರು:ರಾಜ್ಯದಲ್ಲಿ ಜನಪ್ರಿಯಗೊಂಡಿರುವ 'ಶಕ್ತಿ ಯೋಜನೆ' ಜಾರಿ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಆಂಧ್ರಪ್ರದೇಶದ ಗೃಹ ಸಚಿವೆ ಅನಿತಾ ಹಾಗೂ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ ಅವರ ನೇತೃತ್ವದ ನಿಯೋಗವು ಶುಕ್ರವಾರ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.
ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ ಯೋಜನೆ ಜಾರಿಗೆ ತರುವ ಸಂಬಂಧ ನಿಯೋಗವು ಶಕ್ತಿ ಯೋಜನೆಗಾಗಿ ಮೀಸಲಿರಿಸಿದ ವೆಚ್ಚ ಹಾಗೂ ಬಳಕೆ, ಸಾರಿಗೆ ವ್ಯವಸ್ಥೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ತಿಳಿದುಕೊಂಡಿತು.
ಇದಕ್ಕೂ ಮುನ್ನ ನಿಯೋಗ ಶಕ್ತಿ ಯೋಜನೆ ಬಗ್ಗೆ ಅರಿಯಲು ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರ ಪ್ರತಿಕ್ರಿಯೆ ಪಡೆಯಿತು. ಯೋಜನೆಯಿಂದಾಗಿ ಎಷ್ಟು ಉಪಯೋಗವಾಗಿದೆ? ಹೇಗೆ ಉಪಯೋಗವಾಗಿದೆ? ಎಂಬುದರ ಪ್ರಶ್ನೆಗೆ ಮಹಿಳಾ ಪ್ರಯಾಣಿಕರೊಬ್ಬರು ಉತ್ತರಿಸಿ, ಶಕ್ತಿ ಯೋಜನೆಯಿಂದಾಗಿ ನಮಗೆ ಅನುಕೂಲವಾಗಿದೆ. ಪ್ರತಿತಿಂಗಳು 1,200 ರೂಪಾಯಿ ಬಸ್ ಪಾಸ್ಗೆ ತಗುಲಿತ್ತು. ಇದೀಗ ಉಚಿತ ಬಸ್ ಪ್ರಯಾಣದಿಂದಾಗಿ ನಮಗೆ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಚಿವ ರಾಮಲಿಂಗಾರೆಡ್ಡಿ (ETV Bharat) ಇನ್ನೆರಡು ತಿಂಗಳೊಳಗೆ ಆಂಧ್ರದಲ್ಲಿ ಯೋಜನೆ ಜಾರಿ:ಆ ಬಳಿಕ ಆಂಧ್ರಪ್ರದೇಶದ ನಿಯೋಗದೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ಸಭೆ ನಡೆಸಿ ಕೂಲಂಕಷ ಮಾಹಿತಿ ನೀಡಿದರು. ಈ ವೇಳೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆಂಧ್ರ ಸಾರಿಗೆ ರಾಮ್ ಪ್ರಸಾದ್ ರೆಡ್ಡಿ, ''ಕರ್ನಾಟಕ ರಾಜ್ಯ ಸಾರಿಗೆ ನಿಗಮವು ಶಕ್ತಿ ಯೋಜನೆ ಅನುಷ್ಠಾನದ ಬಗ್ಗೆ ತಿಳಿದುಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದೇವೆ. ಇಲ್ಲಿನ ಸರ್ಕಾರ ಅನುಸರಿಸಿದ ಕ್ರಮಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ ಯೋಜನೆ ಜಾರಿ ತಂದಿರುವ ರಾಜ್ಯಗಳಲ್ಲಿ ಭೇಟಿ ನೀಡಿ ಸಾಧಕ-ಭಾದಕಗಳ ಬಗ್ಗೆ ತಿಳಿದುಕೊಂಡು ಇನ್ನೆರಡು ತಿಂಗಳೊಳಗಾಗಿ ಆಂಧ್ರದಲ್ಲಿ ಯೋಜನೆಯನ್ನು ಜಾರಿ ತರುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಯೋಗಕ್ಕೆ ರಾಮಲಿಂಗಾರೆಡ್ಡಿ ಸಲಹೆ:ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ''ಶಕ್ತಿ ಯೋಜನೆ ಜಾರಿಯ ಸಾಧಕ-ಬಾಧಕಗಳ ಬಗ್ಗೆ ತಿಳಿಸಲಾಗಿದೆ. ರಾಜ್ಯದಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಯಾಣದಂತೆ ಆಂಧ್ರದಲ್ಲಿಯೂ ಪ್ರತ್ಯೇಕ ಸ್ಮಾರ್ಟ್ ಕಾಡ್ ವಿತರಿಸಬಹುದಾಗಿದೆ. ಯೋಜನೆ ಜಾರಿ ಬಂದರೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ನಲ್ಲಿ ಜನರು ಸಂಚರಿಸುತ್ತಾರೆ. ಹೀಗಾಗಿ, ಯೋಜನೆ ಜಾರಿಗೂ ಮುನ್ನ ಬಸ್ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗುತ್ತದೆ. ಹಳೆ ಬಸ್ಗಳ ನವೀಕರಣ ಹಾಗೂ ನಿರ್ವಹಣೆ ಬಗ್ಗೆ ಗಮನಕೊಡುವಂತೆ ನಿಯೋಗಕ್ಕೆ ಸಲಹೆ ನೀಡಿದ್ದೇನೆ'' ಎಂದರು.
ಇದನ್ನೂ ಓದಿ:ಶಕ್ತಿ ಯೋಜನೆ ಅನುಷ್ಠಾನಕ್ಕಾಗಿ ಬೆಂಗಳೂರಿಗೆ ಭೇಟಿ ನೀಡಿದ ಆಂಧ್ರ ಸರ್ಕಾರದ ನಿಯೋಗ