Champions Trophy 2025: ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಮಹತ್ವದ ಪಂದ್ಯಾವಳಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಆದರೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಈಗಾಗಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ. ಜೊತೆಗೆ, ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ದುಬೈ ಅಥವಾ ಶ್ರೀಲಂಕಾದಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ)ಗೂ ತಿಳಿಸಿದೆ.
2008ರಲ್ಲಿ ಪಾಕಿಸ್ತಾನದಲ್ಲಿ ನಡೆದಿದ್ದ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ ಭಾಗವಹಿಸಿತ್ತು. ಇದಾದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದೆ. ಅಂದಿನಿಂದ ಇಲ್ಲಿಯವರೆಗೂ ಪಾಕಿಸ್ತಾನದಲ್ಲಿ ಟೀಂ ಇಂಡಿಯಾ ಯಾವುದೇ ಪಂದ್ಯಾವಳಿಗಳನ್ನು ಆಡಿಲ್ಲ. ದ್ವಿಪಕ್ಷೀಯ ಸರಣಿಯೂ ನಿಂತು ಹೋಗಿದೆ. ಸದ್ಯ ಐಸಿಸಿ ಆಯೋಜಿತ ಟೂರ್ನಿ ಮತ್ತು ಏಷ್ಯಾಕಪ್ಗಳಲ್ಲಿ ಮಾತ್ರ ಭಾರತ-ಪಾಕ್ ಮುಖಾಮುಖಿಯಾಗುತ್ತಿವೆ.
ಭಾರತ ಕ್ರಿಕೆಟ್ ಪಂದ್ಯಗಳನ್ನು ಆಡಲು ಪಾಕಿಸ್ತಾನಕ್ಕೆ ಹೋಗದಿರಲು ಪ್ರಮುಖ ಕಾರಣವೆಂದರೆ ಭದ್ರತಾ ಸಮಸ್ಯೆ. ಭಯೋತ್ಪಾದಕ ದುಷ್ಕೃತ್ಯಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಭಾರತೀಯರಿಗೆ ಸೂಕ್ತ ಭದ್ರತೆ ಸಿಗದಿರುವುದರಿಂದ ಅಲ್ಲಿಗೆ ಪ್ರಯಾಣಿಸುವುದನ್ನು ನಿಲ್ಲಿಸಿದೆ. ಇದಕ್ಕೆ ಉದಾಹರಣೆ, 1989ರಲ್ಲಿ ನಡೆದಿದ್ದ ಆ ಒಂದು ಘಟನೆ. ಇಂದಿಗೂ ಅದು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ತಡೆಯುತ್ತಿದೆ.