ಚಂಡೀಗಢ: ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಂದರ್ಶನವನ್ನು ರೆಕಾರ್ಡ್ ಮಾಡಲು ಖಾಸಗಿ ವಾಹಿನಿಗೆ ನೆರವಾದ ಆರೋಪದಡಿ ಡಿಎಸ್ಪಿ ದರ್ಜೆಯ ಅಧಿಕಾರಿಯನ್ನು ಪಂಜಾಬ್ ಸರ್ಕಾರ ಹುದ್ದೆಯಿಂದಲೇ ವಜಾ ಮಾಡಿದೆ.
ರಾಜ್ಯ ಗೃಹ ಸಚಿವಾಲಯದ ಕಾರ್ಯದರ್ಶಿ ಗುರುಕೀರತ್ ಕಿರ್ಪಾಲ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ. ಡಿಎಸ್ಪಿ ಗುರ್ಶೆರ್ ಸಿಂಗ್ ಸಂಧು ಸಂವಿಧಾನದ ವಿಧಿ 311ರ ಅಡಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಾರ್ಚ್ 2023ರಂದು ಖಾಸಗಿ ಸುದ್ದಿ ಚಾನಲ್ ಬಿಷ್ಣೋಯಿಯ ಎರಡು ಸಂದರ್ಶನವನ್ನು ಪ್ರಸಾರ ಮಾಡಿತ್ತು.
ಕಳೆದ ಜುಲೈನಲ್ಲಿ ಪಂಜಾಬ್ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ಹೈಕೋರ್ಟ್ಗೆ ಈ ಕುರಿತು ವರದಿ ನೀಡಿತ್ತು. ಈ ವರದಿಯಲ್ಲಿ, ಎರಡು ವರ್ಷಗಳ ಹಿಂದೆ ಮೊಹಾಲಿಯ ಖರಾರ್‌ನಲ್ಲಿ ಪೊಲೀಸ್ ವಶದಲ್ಲಿದ್ದ ಬಿಷ್ಣೋಯಿ ಸಂದರ್ಶನದ ಮೂಲಕ ಅಪರಾಧ ಮತ್ತು ಅಪರಾಧಿಗಳನ್ನು ವೈಭವೀಕರಿಸಲಾಗಿದೆ ಎಂದು ತಿಳಿಸಲಾಗಿದೆ.
ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕಾರಣದಲ್ಲಿ 2022ರಿಂದ ಬಿಷ್ಣೋಯಿ ಪೊಲೀಸ್ ವಶದಲ್ಲಿದ್ದಾನೆ. ಕಳೆದ ಅಕ್ಟೋಬರ್ನಲ್ಲಿ ಬಿಷ್ಣೋಯಿ ಸಂದರ್ಶನ ಪ್ರಕರಣ ಸಂಬಂಧ 7 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ: '1940 ರಲ್ಲಿ ಆರ್ಎಸ್ಎಸ್ ಶಾಖೆಗೆ ಡಾ. ಬಿ ಆರ್ ಅಂಬೇಡ್ಕರ್ ಭೇಟಿ ನೀಡಿದ್ದರು'