ಕರ್ನಾಟಕ

karnataka

By ETV Bharat Karnataka Team

Published : Jun 29, 2024, 10:26 AM IST

Updated : Jun 29, 2024, 10:42 AM IST

ETV Bharat / sports

ಅಜೇಯವಾಗಿ ಫೈನಲ್​​ ಪ್ರವೇಶಿಸಿರುವ ಭಾರತ Vs ದಕ್ಷಿಣ ಆಫ್ರಿಕಾ ನಡುವೆ ಹೈವೋಲ್ಟೇಜ್​ ಕದನ; ಯಾರ ಪಾಲಾಗಲಿದೆ 9ನೇ ಆವೃತ್ತಿಯ ವಿಶ್ವಕಿರೀಟ? - India Vs South Africa Final Match

ಟಿ20 ವಿಶ್ವಕಪ್​ 2024ರ ಫೈನಲ್​ ಪಂದ್ಯದಲ್ಲಿ ಪ್ರಶಸ್ತಿಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಲಿವೆ. ಉಭಯ ತಂಡಗಳ ಬಲಾಬಲ, ಪಿಚ್​ ವರದಿ ಸೇರಿ ಕೆಲ ಮಾಹಿತಿ ಈ ಕೆಳಗಿನಂತಿದೆ.

ಇಂದು ಭಾರತ Vs ದಕ್ಷಿಣ ಆಫ್ರಿಕಾ ಹೈವೋಲ್ಟೇಜ್​ ಫೈನಲ್​ ಕದನ
ಇಂದು ಭಾರತ Vs ದಕ್ಷಿಣ ಆಫ್ರಿಕಾ ಹೈವೋಲ್ಟೇಜ್​ ಫೈನಲ್​ ಕದನ (IANS)

ಹೈದರಾಬಾದ್​:ಟಿ20 ವಿಶ್ವಕಪ್ 2024 ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದ್ದು ಇಂದು 9ನೇ ಆವೃತ್ತಿಯ ಚಾಂಪಿಯನ್​ ಯಾರು ಎಂದು ನಿರ್ಧಾರವಾಗಲಿದೆ. 17 ವರ್ಷಗಳ ನಂತರ ಟಿ20 ವಿಶ್ವಕಪ್​ ಗೆಲ್ಲುವ ತವಕದಲ್ಲಿರುವ ಟೀಂ ಇಂಡಿಯಾ ಇಂದು ದಕ್ಷಿಣ ಆಫ್ರಿಕಾದೊಂದಿಗೆ ಸೆಣಸಲಿದೆ. ಮತ್ತೊಂದೆಡೆ ಚೋಕರ್‌ ಪಟ್ಟಿಯನ್ನು ಪಡೆದಿರುವ ದಕ್ಷಿಣ ಆಫ್ರಿಕಾ ಚೋಕರ್​ ಅಪಖ್ಯಾತಿ ಅಳಿಸಿ ಚೊಚ್ಚಲ ವಿಶ್ವಕಪ್​ ಗೆಲ್ಲಲು ಸಜ್ಜಾಗಿದೆ.

ಪ್ರಸಕ್ತ ಋತುವಿನಲ್ಲಿ ಉಭಯ ತಂಡಗಳು ಸೋಲಿಲ್ಲದೇ ಅಜೇಯವಾಗಿ ಫೈನಲ್​ಗೆ ಪ್ರವೇಶಿಸಿವೆ. ದಕ್ಷಿಣ ಆಫ್ರಿಕಾ ಸತತ 8 ಪಂದ್ಯಗಳಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿದ್ದರೇ, ಟೀಂ ಇಂಡಿಯಾ ಕೂಡ ಸತತ 7 ಪಂದ್ಯಗಳನ್ನು ಗೆದ್ದು ಅಂತಿಮ ಘಟ್ಟಕ್ಕೆ ಬಂದು ತಲುಪಿದೆ.

ಉಭಯ ತಂಡಗಳ ಟಿ20 ಇತಿಹಾಸ: 2007ರ ಚೊಚ್ಚಲ ಆವೃತ್ತಿಯ T-20 ವಿಶ್ವಕಪ್ ಗೆದ್ದು ಬೀಗಿದ್ದ ಭಾರತ ನಂತರ ಚಾಂಪಿಯನ್ ಆಗಿಲ್ಲ. 2013ರ ಚಾಂಪಿಯನ್ಸ್ ಟ್ರೋಫಿಯ ಗೆಲುವೇ ಭಾರತದ ಬಳಿಯಿರುವ ಕೊನೆಯ ಐಸಿಸಿ ಟ್ರೋಫಿಯಾಗಿದೆ. T-20 ವಿಶ್ವಕಪ್‌ನಲ್ಲಿ 2014ರಲ್ಲಿ ಫೈನಲ್, 2016 ಹಾಗೂ 2022ರಲ್ಲಿ ಸೆಮಿಫೈನಲ್‌ ತಲುಪಿದ್ದ ಭಾರತಕ್ಕೆ ಜಯ ಸಾಧಿಸಲು ಸಾಧ್ಯವಾಗಿರಲಿಲ್ಲ. ಇನ್ನು ಏಕದಿನ ವಿಶ್ವಕಪ್‌ನಲ್ಲಿ 2015 ಹಾಗೂ 2019ರಲ್ಲಿ ಸೆಮಿಫೈನಲ್‌, 2023ರಲ್ಲಿ ಅಜೇಯವಾಗಿ ಫೈನಲ್ ತಲುಪಿದ್ದ ಭಾರತಕ್ಕೆ ಗೆಲುವು ಮರೀಚಿಕೆಯಾಗುಳಿದಿದೆ. ಹರಿಣಗಳ ಎದುರು ಗೆದ್ದು ಭಾರತ ತನ್ನ ವಿಶ್ವಕಪ್ ಟ್ರೋಫಿಯ ದಾಹ ತೀರಿಸಿಕೊಳ್ಳುವ‌ ತವಕದಲ್ಲಿದೆ.

ಮತ್ತೊಂದೆಡೆ ದ.ಆಫ್ರಿಕಾ ತಂಡ ಮೊದಲ ಬಾರಿಗೆ ವಿಶ್ವಕಪ್‌ ಫೈನಲ್ ತಲುಪಿದೆ. 1998ರ ಉದ್ಘಾಟನಾ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಹೊರತುಪಡಿಸಿದರೆ ಇದುವರೆಗೂ ಯಾವುದೇ ಐಸಿಸಿ ಟೂರ್ನಿಗಳನ್ನ ಹರಿಣಗಳು ಗೆದ್ದಿಲ್ಲ. 1992, 1999, 2007, 2015 ಹಾಗೂ 2023ರ ಏಕದಿನ ವಿಶ್ವಕಪ್‌, ಹಾಗೂ 2009, 2014ರ T-20 ವಿಶ್ವಕಪ್‌ ಟೂರ್ನಿಗಳಲ್ಲಿ ಸೆಮಿಫೈನಲ್ ಹಂತದಲ್ಲಿ ದ.ಆಫ್ರಿಕಾ ತನ್ನ ಯಾನ ಮುಗಿಸಿತ್ತು. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿಗೆ ದ.ಆಫ್ರಿಕಾ ಫೈನಲ್ ಪ್ರವೇಶ ಮಾಡಿದೆ.

ಹೆಡ್​ ಟು ಹೆಡ್:​ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಸ್ವರೂಪದಲ್ಲಿ ಬಲಿಷ್ಠ ತಂಡಗಳಾಗಿವೆ. ಉಭಯ ತಂಡಗಳ ನಡುವೆ ಇದುವರೆಗೂ ಒಟ್ಟು 26 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದೆ. ದಕ್ಷಿಣ ಆಫ್ರಿಕಾ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ಕಾಣದೇ ರದ್ದುಗೊಂಡಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 6 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 4 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎರಡು ತಂಡಗಳ ಅಂಕಿ - ಅಂಶಗಳನ್ನು ಗಮನಿಸಿದರೇ ಭಾರತವೇ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.

ಪಿಚ್ ವರದಿ:ಇಂದಿನ ಫೈನಲ್​ ಪಂದ್ಯ ಬಾರ್ಬಡೋಸ್ ಬ್ರಿಡ್ಜ್‌ಟೌನ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆಯಲಿದೆ. ಈ ಪಿಚ್​ನಲ್ಲಿ ಆರಂಭದಲ್ಲಿ ವೇಗದ ಬೌಲರ್​ಗಳು ಹೆಚ್ಚಿನ ನೆರವು ಪಡೆಯಲಿದ್ದಾರೆ. ಇಲ್ಲಿ ವೇಗದ ಬೌಲರ್‌ಗಳು ಬೌನ್ಸ್ ಮತ್ತು ಸ್ವಿಂಗ್ ಪಡೆಯುತ್ತಾರೆ. ಪಂದ್ಯ ಸಾಗುತ್ತಿದ್ದಂತೆ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ ಬೌಲರ್‌ಗಳು ಪ್ರಾಬಲ್ಯ ಸಾಧಿಸಲಿದ್ದಾರೆ.

ಈ ಮೈದಾನದ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 153 ರನ್ ಆಗಿದೆ. ಇಲ್ಲಿ ದಾಖಲಾದ ಗರಿಷ್ಠ ಸ್ಕೋರ್ 224 ರನ್ ಆಗಿದೆ. ಒಟ್ಟು 32 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದ್ದು, ಇದರಲ್ಲಿ 19 ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡವು ಗೆದ್ದಿದ್ದರೆ, 11 ಪಂದ್ಯಗಳನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡವು ಗೆದ್ದಿದೆ. ಟೀಂ ಇಂಡಿಯಾ ಅಫ್ಘಾನ್​ ವಿರುದ್ದ ಸೂಪರ್-8ರ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಿತ್ತು. ಈ ಪಂದ್ಯದಲ್ಲಿ 181 ರನ್ ಗಳಿಸಿದ್ದ ಭಾರತ ಎದುರಾಳಿ ಅಫ್ಘಾನ್​ ತಂಡವನ್ನು 134 ಕ್ಕೆ ಆಲೌಟ್ ಮಾಡಿ ಭರ್ಜರಿ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು - ಭಾರತ:ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.

ದಕ್ಷಿಣ ಆಫ್ರಿಕಾ:ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜೆನ್ಸನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ.

ಸ್ಥಳ:ಕೆನ್ಸಿಂಗ್ಟನ್ ಓವಲ್‌, ಬ್ರಿಡ್ಜ್‌ಟೌನ್

ದಿನಾಂಕ: ಜೂನ್​ 29

ಸಮಯ: ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಡಿ, ಡಿಸ್ನಿ ಹಾಟ್‌ಸ್ಟಾರ್‌

ಇದನ್ನೂ ಓದಿ:ಕೋಚ್​ ದ್ರಾವಿಡ್​​ಗೆ T20 ವಿಶ್ವಕಪ್ ಟ್ರೋಫಿ ಗೆಲ್ಲುವ ಬಯಕೆಯಂತೆ: ಇದು ಕೋಚ್​​ ಆಗಿ ದಿ ವಾಲ್​​ಗೆ ಕೊನೆಯ ಪಂದ್ಯ! - DRAVID WHAT SAYS ABOUT T20WC

Last Updated : Jun 29, 2024, 10:42 AM IST

ABOUT THE AUTHOR

...view details