ನವದೆಹಲಿ: ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮತ್ತೋರ್ವ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಟಿ-20 ತಂಡದ ನಾಯಕತ್ವ ವಹಿಸುವ ನಿರೀಕ್ಷೆ ಇದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ.
ಭಾರತ ಕಳೆದ ತಿಂಗಳು 2024ರ ಟಿ-20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ-20 ಒಳಗೊಂಡ ಮೂರು ಮಾದರಿಗಳಲ್ಲಿ ತಂಡವನ್ನು ರೋಹಿತ್ ಮುನ್ನಡೆಸುತ್ತಿದ್ದರು. ಈಗ ಟಿ-20ಯಿಂದ ಅವರು ವಿದಾಯ ಪಡೆದಿರುವುದರಿಂದ ನಾಯಕತ್ವದ ಪಾತ್ರವೂ ತೆರವಾಗಿದೆ.
ಇದೀಗ ಟೀಂ ಇಂಡಿಯಾ ಟಿ-20 ಹಾಗೂ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಸಜ್ಜಾಗಿದೆ. ಜುಲೈ 27ರಿಂದ 30ರವರೆಗೆ 3 ಟಿ-20 ಹಾಗೂ ಅಗಸ್ಟ್ 2ರಿಂದ 7ರವರೆಗೆ 3 ಏಕದಿನ ಪಂದ್ಯಗಳು ನಿಗದಿಯಾಗಿವೆ. ಟಿ-20ಯಲ್ಲಿ ತಂಡದ ಮುಂದಾಳತ್ವವನ್ನು ಹಾರ್ದಿಕ್ ಪಾಂಡ್ಯ ಅವರಿಗೆ ವಹಿಸುವ ನಿರೀಕ್ಷೆ ಹೆಚ್ಚಾಗಿತ್ತು. ಅಲ್ಲದೇ, ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಹಾರ್ದಿಕ್ ಅವರೊಂದಿಗೆ ಮಾತನಾಡಿ, ದೀರ್ಘಾವಧಿಯವರಿಗೂ ಅವರಿಗೆ ಅವಕಾಶ ಇರುವ ಬಗ್ಗೆ ವಿವರಿಸಿದ್ದರು. ಆದರೆ, ದ್ವೀಪರಾಷ್ಟ್ರದಲ್ಲಿ ನಡೆಯುವ ಏಕದಿನ ಸರಣಿಯಿಂದ ಹಾರ್ದಿಕ್ ತಮ್ಮ ವೈಯಕ್ತಿಕ ಕಾರಣಕ್ಕಾಗಿ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಸೂರ್ಯಗೆ ಕ್ಯಾಪ್ಟನ್ಸಿ ಚಾನ್ಸ್:ಮತ್ತೊಂದೆಡೆ, ಲಂಕಾ ವಿರುದ್ಧದ ಸರಣಿಗೆ ಕೆಲವೇ ದಿನಗಳಲ್ಲಿ ತಂಡವನ್ನು ಪ್ರಕಟಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ನಡುವೆ ಹಾರ್ದಿಕ್ ಅಲಭ್ಯವಾಗುವ ವಿಷಯ ವರದಿಯಾಗಿದೆ. ಹೀಗಾಗಿಯೇ ಟಿ-20ಯಲ್ಲಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವ ವಹಿಸುವ ಸಾಧ್ಯತೆ ಹೆಚ್ಚು.