ICC Fines Virat Kohli: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ 4ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG)ನಲ್ಲಿ ಇಂದಿನಿಂದ ಪ್ರಾರಂಭವಾಗಿದೆ. ಮೊದಲ ದಿನದಾಟ ಮುಕ್ತಾಯಗೊಂಡಿದ್ದು, ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿದೆ. ಏತನ್ಮಧ್ಯೆ, ಮೊದಲ ದಿನದಂದು ನಡೆದ ಅಹಿತಕರ ಘಟನೆಯೊಂದು ನಡೆದಿದೆ.
ಪಂದ್ಯದ ಹತ್ತನೇ ಓವರ್ ವೇಳೆ ವಿರಾಟ್ ಕೊಹ್ಲಿ, ಯುವ ಬ್ಯಾಟರ್ ಸ್ಯಾಮ್ ಕಾನ್ಸ್ಟಾಸ್ ಜೊತೆ ಜಗಳ ಮಾಡಿಕೊಂಡಿದ್ದಾರೆ. ಸದ್ಯ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೊಹ್ಲಿ ಬೇಕೆಂತಲೇ ಕಾನ್ಸ್ಟಾಸ್ ಅವರಿಗೆ ಡಿಕ್ಕಿ ಹೊಡೆದು ಜಗಳಕ್ಕಿಳಿದಿದ್ದಾರೆ ಎಂದು ಹಲವಾರು ಜನ ಅಭಿಪ್ರಾಯ ಪಟ್ಟಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಐಸಿಸಿ ವಿರಾಟ್ ವಿರುದ್ಧ ಕ್ರಮ ಕೈಗೊಂಡಿದೆ.
Virat Kohli and Sam Konstas exchanged a heated moment on the MCG. #AUSvIND pic.twitter.com/QL13nZ9IGI
— cricket.com.au (@cricketcomau) December 26, 2024
ಉದ್ದೇಶಪೂರ್ವಕವಾಗಿ ಕೋಹ್ಲಿ ಜಗಳ ಮಾಡಿಕೊಂಡಿದ್ದು ಕಂಡುಬಂದಿರುವ ಕಾರಣ ಐಸಿಸಿ ಸೆಕ್ಷನ್ 2.12ರ ಪ್ರಕಾರ ಪಂದ್ಯದ ಶೇ.20 ರಷ್ಟು ದಂಡ ವಿಧಿಸಲಾಗಿದೆ. ಇದರ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಿ ಐಸಿಸಿ ತೀರ್ಪು ಪ್ರಕಟಿಸಿದೆ. 20% ದಂಡದ ಬಳಿಕ ಕೊಹ್ಲಿ ಎಷ್ಟು ಹಣ ಪಡೆಯಲಿದ್ದಾರೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಿದ್ದಾರೆ. ಹಾಗಾದ್ರೆ ಕೊಹ್ಲಿ ಟೆಸ್ಟ್ ಪಂದ್ಯವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು, 20% ದಂಡದ ಬಳಿಕ ಅವರ ಕೈ ಸೇರಲಿರುವ ಹಣ ಎಷ್ಟು ಎಂಬುದರ ಬಗ್ಗೆ ಇದೀಗ ತಿಳಿದುಕೊಳ್ಳೋಣ.
ಕೊಹ್ಲಿ ಕೈ ಸೇರಲಿರುವ ಹಣ ಏಷ್ಟು? ಬಿಸಿಸಿಐನ ಕೇಂದ್ರ ಒಪ್ಪಂದದ ಪಟ್ಟಿಯಲ್ಲಿ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಜೊತೆಗೆ ವಿರಾಟ್ ಕೊಹ್ಲಿ ಗ್ರೇಡ್ A+ ವಿಭಾಗದಲ್ಲಿದ್ದಾರೆ. A+ ಗ್ರೇಡ್ ವಿಭಾಗದ ಕ್ರಿಕೆಟರ್ಗಳು ಸಾಮಾನ್ಯವಾಗಿ ಟೆಸ್ಟ್ ಪಂದ್ಯವೊಂದಕ್ಕೆ 15 ಲಕ್ಷ ರೂಪಾಯಿ ಶುಲ್ಕವನ್ನು ಪಡೆಯುತ್ತಾರೆ. ಇದೀಗ ಕೊಹ್ಲಿಗೆ ಶೇ.20 ರಷ್ಟು ದಂಡ ವಿಧಿಸಿದ್ದರಿಂದಾಗಿ ಅವರ ಪಂದ್ಯದ ಶುಲ್ಕದಲ್ಲಿ 3 ಲಕ್ಷ ರೂಪಾಯಿಯನ್ನು ಕಡಿತಗೊಳಿಸಲಾಗುತ್ತದೆ. ಅಂದರೆ ಮೆಲ್ಬೋರ್ನ್ ಮೈದಾನದಲ್ಲಿನ ಪಂದ್ಯದ ಬಳಿಕ ಕೊಹ್ಲಿ ₹12 ಲಕ್ಷ ರೂಪಾಯಿ ಪಂದ್ಯದ ಶುಲ್ಕ ಪಡೆಯಲಿದ್ದಾರೆ.
ದಂಡ ಕಟ್ಟುವವರು ಯಾರು? ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳೆ ಕೊಹ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ)ನ ಅಂದಿನ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರೊಂದಿಗೆ ಪಂದ್ಯದ ಬಳಿಕ ಮೈದಾನದಲ್ಲೇ ತೀವ್ರ ವಾಗ್ವಾದಕ್ಕಿಳಿದಿದ್ದರು. ಐಪಿಎಲ್ ನೀತಿ ಸಂಹಿತೆ ಲೆವೆಲ್ 2 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಪಂದ್ಯದ ಶುಲ್ಕ ಶೇ.100 ಪ್ರತಿಶತದಷ್ಟು ದಂಡ ವಿಧಿಸಲಾಗಿತ್ತು. ಆದರೆ ಈ ದಂಡವನ್ನು ಕೊಹ್ಲಿ ಪಾವತಿಸಿರಲಿಲ್ಲ. ಬದಲಿಗೆ ಆರ್ಸಿಬಿ ಮ್ಯಾನೇಜ್ಮೆಂಟ್ ಇದನ್ನು ಭರಿಸಿತ್ತು ಎಂದು ಕ್ರಿಕ್ಬಝ್ ವರದಿ ಮಾಡಿತ್ತು.
ಹೀಗಾಗಿ ಈ ಬಾರಿಯೂ ಬಿಸಿಸಿಐ ದಂಡ ಪಾವತಿಸುವ ಸಾಧ್ಯತೆಯಿದೆ ಹೊರತು, ಕೊಹ್ಲಿ ಅಲ್ಲ ಎಂದು ಹೇಳಲಾಗುತ್ತದೆ. ಆದರೆ ದಂಡವನ್ನು ಯಾರು ಪಾವತಿಸುತ್ತಾರೆ ಎಂಬುದಕ್ಕೆ ಯಾವುದೇ ಖಚಿತ ಮಾಹಿತಿ ಇಲ್ಲ.
ಇದನ್ನೂ ಓದಿ: ಸ್ಯಾಮ್ ಕಾನ್ಸ್ಟಾಸ್ ಜೊತೆ ಜಗಳ ಮಾಡಿದ ಕೊಹ್ಲಿಗೆ ಬಿಗ್ ಶಾಕ್ ನೀಡಿದ ಐಸಿಸಿ!