Virat kohli sam konstas Incident: ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸಧ್ಯ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು ಮೇಲ್ಬೋರ್ನ್ನ ಎಮ್ಸಿಎ ಮೈದಾನದಲ್ಲಿ ಇಂದಿನಿಂದ ನಾಲ್ಕನೇ ಪಂದ್ಯ (ಬಾಕ್ಸಿಂಗ್ ಡೇ ಟೆಸ್ಟ್) ಆರಂಭವಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿರುವ ಆಸ್ಟ್ರೇಲಿಯಾ ಮೊದಲ ದಿನದಾಟಕ್ಕೆ ಉತ್ತಮ ಸ್ಕೋರ್ ಕಲೆಹಾಕಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಬಂದ ಸ್ಯಾಮ್ ಕಾನ್ಸ್ಟಾಸ್ ಮತ್ತು ಉಸ್ಮಾನ್ ಖವಾಜ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಅದರಲ್ಲೂ ಚೊಚ್ಚಲ ಪಂದ್ಯದಲ್ಲೇ ಕಾನ್ಸ್ಟಾಸ್ ಭಾರತೀಯ ಬೌಲರ್ಗಳನ್ನು ಕಾಡಿ ವೇಗವಾಗಿ ಅರ್ಧಶತಕ ಸಿಡಿಸಿದರು. ಕಾನ್ಸ್ಟಾಸ್ ತಮ್ಮ ಇನ್ನಿಂಗ್ಸ್ನಲ್ಲಿ 65 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 60 ರನ್ ಚಚ್ಚಿದರು. ಆದ್ರೆ ಜಡೇಜಾ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಮತ್ತೊಂದೆಡೆ ಉಸ್ಮಾನ್ ಖವಾಜ (57), ಮಾರ್ನಸ್ ಲಾಬುಶೇನೆ (72) ಅರ್ಧಶತಕ ಸಿಡಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಳೆದ ಮೂರು ಪಂದ್ಯಗಳಲ್ಲಿ ಭಾರತವನ್ನು ಕಾಡಿದ್ದ ಟ್ರಾವಿಸ್ ಹೆಡ್ ಇಂದು ಖಾತೆ ತೆರೆಯದೇ ಡಕ್ಔಟ್ ಆಗಿ ಪೆವಿಲಿಯನ್ ಸೇರಿದರು. ಸ್ಟೀವ್ ಸ್ಮಿತ್ 68 ರನ್ ಗಳಿಸೆ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟ ಮುಕ್ತಾಯದ ವೇಳೆಗೆ ಕಾಂಗರೂ ಪಡೆ 6 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿದೆ.
ಏತನ್ಮಧ್ಯೆ, ಪಂದ್ಯದ ಹತ್ತನೇ ಓವರ್ ವೇಳೆ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ 19 ವರ್ಷದ ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಮಧ್ಯೆ ವಾಗ್ವಾದ ನಡೆದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಕೊಹ್ಲಿ ಬೇಕಂತಲೆ ಕಾನ್ಸ್ಟಾಸ್ಗೆ ಡಿಕ್ಕಿ ಹೊಡೆದು ಜಗಳ ತೆಗೆದುಕೊಂಡಿದ್ದರು. ವಾಸ್ತವಾಗಿ ಮೊಹ್ಮದ್ ಸಿರಾಜ್ ಹತ್ತನೇ ಓವರ್ ಮುಗಿಸಿದ ವೇಳೆ, ಕೊಹ್ಲಿ ಚೆಂಡನ್ನು ಕೈಯಲ್ಲಿ ಹಿಡಿದು ಹೋಗುವಾಗ ಕಾನ್ಸ್ಟಾಸ್ ಭುಜಕ್ಕೆ ಬೇಕಂತಲೇ ಡಿಕ್ಕಿ ಹೊಡೆದಿದ್ದಾರೆ.
Virat Kohli and Sam Konstas exchanged a heated moment on the MCG. #AUSvIND pic.twitter.com/QL13nZ9IGI
— cricket.com.au (@cricketcomau) December 26, 2024
ಇದರಿಂದ ಇಬ್ಬರ ಮಧ್ಯೆ ವಾಗ್ವಾದ ಶುರುವಾಗಿದೆ. ಕೂಡಲೇ ಅಂಪೈರ್ ಮತ್ತು ಉಸ್ಮಾನ್ ಖವಾಜಾ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘಟನೆಯಲ್ಲಿ ಕೊಹ್ಲಿ ಅವರದ್ಧೇ ತಪ್ಪು ಇರುವುದು ಕಂಡು ಬಂದಿದೆ. ಈ ಹಿನ್ನೆಲೆ ICC ಕ್ರಮ ಕೈಗೊಂಡಿದೆ.
ಕೊಹ್ಲಿಗೆ ದಂಡ: ಕಾನ್ಸ್ಟಾಸ್ ವಿರುದ್ದ ಕೊಹ್ಲಿ ತೋರಿರುವ ವರ್ತನೆಗೆ ಐಸಿಸಿ 2.12ರ ಅಡಿಯಲ್ಲಿ ಕ್ರಮ ಕೈಗೊಂಡಿದೆ. ಈ ಹಿನ್ನೆಲೆ ಪಂದ್ಯದ ಶುಲ್ಕ ಶೇ.20ರಷ್ಟು ದಂಡ ವಿಧಿಸಿ ಆದೇಶ ಮಾಡಿದೆ. ಇದರೊಂದಿಗೆ 1 ಡಿಮೆರೆಟ್ ಅಂಕ ಕೂಡ ನೀಡಿ ಶಾಕ್ ಕೊಟ್ಟಿದೆ. ಉದ್ದೇಶಪೂರ್ವಕವಾಗಿ ಸಹಾಯಕ ಸಿಬ್ಬಂದಿ, ಅಂಪೈರ್ ಮ್ಯಾಚ್ ರೆಫರಿ ಅಥವಾ ಆಟಗಾರರ ವಿರುದ್ದ ದೈಹಿಕವಾಗಿ ಘರ್ಷಣೆಗಿಳಿದರೇ ಅಥವಾ ನಿಂದಿಸಿದರೇ ICC ಆರ್ಟಿಕಲ್ 2.12ರ ಅಡಿಯಲ್ಲಿ ಡಿಮೆರಿಟ್ ಅಂಕಗಳನ್ನು ಪಡೆಯುವುದರ ಜೊತೆಗೆ ಒಂದು ಪಂದ್ಯದಿಂದ ನಿಷೇಧ ವಿಧಿಸಬಹುದು ಅಥವಾ ದಂಡಕ್ಕೆ ಅವಕಾಶ ಇರುತ್ತದೆ.
ಇದನ್ನೂ ಓದಿ: 19 ವರ್ಷದ ಯುವ ಆಟಗಾರನೊಂದಿಗೆ ಬೇಕಂತಲೇ ಜಗಳಕ್ಕಿಳಿದ ವಿರಾಟ್ ಕೊಹ್ಲಿಗೆ ನಿಷೇಧ?