Sachin 24 Runs In 3 Balls: ಕ್ರಿಕೆಟ್ನಲ್ಲಿ ದಾಖಲೆ ಬರೆಯುವುದು, ಮುರಿಯುವುದೆಲ್ಲವೂ ಸಹಜ. ಆದರೆ ಇಂದಿಗೂ ಯಾರಿಂದಲೂ ಮುರಿಯಲಾಗದ ಅಪರೂಪದ ರೆಕಾರ್ಡ್ಗಳು ಕ್ರಿಕೆಟ್ನಲ್ಲಿ ದಾಖಲಾಗಿವೆ. ಈ ಪೈಕಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡೂಲ್ಕರ್ ನಿರ್ಮಿಸಿರುವ ದಾಖಲೆಯೊಂದು ವಿಶೇಷವಾಗಿದೆ.
ಹೌದು, ತೆಂಡೂಲ್ಕರ್ ಯಾವುದೇ ನೋಬಾಲ್ ಮತ್ತು ವೈಡ್ ಬಾಲ್ ಇಲ್ಲದೆಯೇ 3 ಸರಿಯಾದ ಎಸೆತಗಳಲ್ಲಿ 24 ರನ್ ಸಿಡಿಸಿದ್ದಾರೆ. ಅದೂ ಕೂಡ ಅಂತಾರಾಷ್ಟ್ರೀಯ ಪಂದ್ಯದಲ್ಲಿ.
ಸಚಿನ್ ತೆಂಡೂಲ್ಕರ್ (Getty Images) ಕ್ರೈಸ್ಟ್‌ಚರ್ಚ್ ಮೈದಾನದಲ್ಲಿ ಸಚಿನ್ ದಾಖಲೆ:2002-03ರಲ್ಲಿ ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಡಿಸೆಂಬರ್ 4, 2002ರಂದು ಕ್ರೈಸ್ಟ್‌ಚರ್ಚ್ ಮೈದಾನದಲ್ಲಿ ನಡೆದ ಕಿವೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿನ್ ಬಿರುಸಿನ ಬ್ಯಾಟಿಂಗ್ ಮಾಡಿದ್ದರು. ಕೇವಲ 27 ಎಸೆತಗಳಲ್ಲಿ 72 ರನ್ ಚಚ್ಚಿದ್ದರು. ಇದು ಸಚಿನ್ ಕ್ರಿಕೆಟ್ ವೃತ್ತಿಜೀವನದ ಅತ್ಯಂತ ರೋಚಕ ಇನ್ನಿಂಗ್ಸ್ ಆಗಿಯೂ ಖ್ಯಾತಿ ಪಡೆದಿದೆ. ಸ್ವತಃ ಸಚಿನ್ ಕೂಡ ಇದನ್ನು ತಮ್ಮ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ಎಂದು ಹೇಳಿದ್ದಾರೆ. ಅಲ್ಲದೆ ಇದೇ ಇನ್ನಿಂಗ್ಸ್ನಲ್ಲಿ ಯಾವುದೇ ನೋಬಾಲ್ ಮತ್ತು ವೈಡ್ಬಾಲ್ ಇಲ್ಲದೇ 3 ಲೀಗಲ್ ಎಸೆತಗಳಲ್ಲಿ 24 ರನ್ಗಳನ್ನು ಸಿಡಿಸಿದ್ದರು. ಇದು ನಂಬಲಸಾಧ್ಯವಾದರೂ ನಿಜ.
ಸಚಿನ್ ತೆಂಡೂಲ್ಕರ್ (Getty Images) ವಾಸ್ತವವಾಗಿ, ಈ ಪ್ರವಾಸದಲ್ಲಿ ಐಸಿಸಿ 'ಕ್ರಿಕೆಟ್ ಮ್ಯಾಕ್ಸ್ ಇಂಟರ್ನ್ಯಾಷನಲ್' ಹೆಸರಿನಲ್ಲಿ ಏಕದಿನ ಪಂದ್ಯ ಆಯೋಜಿಸಿತ್ತು. ಟೆಸ್ಟ್ ಸ್ವರೂಪದಂತೆ ಎರಡೂ ತಂಡಗಳಿಗೆ ತಲಾ 10 ಓವರ್ಗಳಂತೆ ಎರಡೆರಡು (ಒಟ್ಟು 4 ಇನ್ನಿಂಗ್ಸ್) ಇನ್ನಿಂಗ್ಸ್ಗಳನ್ನು ಆಡಿಸಲಾಗಿತ್ತು. ತಲಾ ತಂಡದಲ್ಲಿ 11 ಆಟಗಾರರ ಬದಲಿಗೆ 12 ಆಟಗಾರರನ್ನು ಆಡಿಸಲಾಗಿತ್ತು. ಪಂದ್ಯದಲ್ಲಿ 'ಮ್ಯಾಕ್ಸ್ ಝೋನ್' ಎಂದು ಚೌಕಕಾರದ ಝೋನ್ ಒಂದನ್ನು ಬೌಂಡರಿ ಲೈನ್ ಬಳಿ ಸ್ಥಾಪಿಸಲಾಗಿತ್ತು. ಬ್ಯಾಟರ್ ಬಾರಿಸಿದ ಚೆಂಡು ಈ ವಲಯದಲ್ಲಿ ಬಿದ್ದರೆ ಡಬಲ್ ರನ್ಗಳು ಸಿಗುತ್ತಿದ್ದವು. ಅಂದರೆ ಬೌಂಡರಿ ಬಾರಿಸಿದರೆ 4 ರನ್ಗಳ ಬದಲಿಗೆ 8 ರನ್ಗಳು, ಸಿಕ್ಸ್ ಸಿಡಿಸಿದರೆ 6 ರನ್ಗಳ ಬದಲಿಗೆ 12 ರನ್ಗಳನ್ನು ನೀಡಲಾಗುತ್ತಿತ್ತು.
ಸಚಿನ್ ತೆಂಡೂಲ್ಕರ್ (Getty Images) ಸಚಿನ್ ಸತತ ಮೂರು ಎಸೆತಗಳನ್ನು ‘ಮ್ಯಾಕ್ಸ್ ಝೋನ್’ಗೆ ಬಾರಿಸಿದ್ದರು. ಈ 3 ಎಸೆತಗಳಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಹಾಗೂ 2ರನ್ ಗಳಿಸಿದ್ದರು. ಅಂದರೆ ಕ್ರಮವಾಗಿ 8, 12 ಮತ್ತು 4 ರನ್ ಗಳಿಸಿದರು. ಈ ಮೂಲಕ ಸತತ ಮೂರು ಲೀಗಲ್ ಎಸೆತಗಳಲ್ಲಿ 24 ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದರು.
ಇದನ್ನೂ ಓದಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ: ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?