ನವದೆಹಲಿ: ಪ್ರತೀ ವರ್ಷ ಭಾರತ ಸರ್ಕಾರ ಕ್ರೀಡಾಪಟುಗಳ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ' ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ವರ್ಷವೂ ಕ್ರೀಡಾ ಸಾಧಕರ ಕೆಲವು ಹೆಸರುಗಳನ್ನು ಶಿಫಾರಸು ಮಾಡಿದ್ದು, ಬಹಿರಂಗವಾಗಿದೆ. ಆದರೆ ಬಿಡುಗಡೆಯಾದ ಪಟ್ಟಿಯಲ್ಲಿ ಭಾರತದ ಶೂಟಿಂಗ್ ತಾರೆ ಮನು ಭಾಕರ್ ಹೆಸರಿಲ್ಲ. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದರ ಬೆನ್ನಲ್ಲೇ ಕ್ರೀಡಾ ಸಚಿವಾಲಯದ ಅಧಿಕಾರಿಗಳು, ಮನು ಅವರು ಖೇಲ್ ರತ್ನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದ್ದರು. ಆದರೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರೂ ಸಮಿತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮನು ಅವರ ತಂದೆ ಹೇಳಿದ್ದರು. ಇದರಿಂದಾಗಿ ಈ ವಿಚಾರ ಮತ್ತಷ್ಟು ವಿವಾದವಾಯಿತು. ಇದೀಗ ಸ್ವತಃ ಮನು ಭಾಕರ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
— Manu Bhaker🇮🇳 (@realmanubhaker) December 24, 2024
"ಕ್ರೀಡಾಪಟುವಾಗಿ ದೇಶಕ್ಕಾಗಿ ಆಡುವುದೊಂದೇ ನನ್ನ ಕರ್ತವ್ಯ. ಮನ್ನಣೆ ಮತ್ತು ಪ್ರಶಸ್ತಿಗಳು ನನಗೆ ಸ್ಫೂರ್ತಿ ನೀಡುತ್ತವೆ. ಆದರೆ, ಇವೇ ನನ್ನ ಗುರಿಗಳಲ್ಲ. ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ತಪ್ಪು ನಡೆದಿರಬಹುದು. ಅದು ಪರಿಹಾರವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಪ್ರಶಸ್ತಿಗಳು ಏನೇ ಇರಲಿ, ದೇಶಕ್ಕಾಗಿ ಇನ್ನಷ್ಟು ಪದಕಗಳನ್ನು ಗೆಲ್ಲಲು ಬಯಸುತ್ತೇನೆ"- ಮನು ಭಾಕರ್.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ನೇತೃತ್ವದಲ್ಲಿ 12 ಸದಸ್ಯರನ್ನೊಳಗೊಂಡ 'ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ' ಸಮಿತಿ ರಚಿಸಲಾಗಿತ್ತು. ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕ್ರೀಡಾಪಟುಗಳಿಗೆ ಸಚಿವಾಲಯ ಅವಕಾಶ ಒದಗಿಸಿತ್ತು. ಆದರೆ ಮನು ಭಾಕರ್ ಹೆಸರು ಈ ಪಟ್ಟಿಯಲ್ಲಿ ಕಾಣಿಸಿದೇ ಇದ್ದ ಕಾರಣ ವಿವಾದವಾಗಿತ್ತು.
ಕೇಂದ್ರ ಕ್ರೀಡಾ ಸಚಿವಾಲಯದ ಉನ್ನತ ಮೂಲಗಳು ಪ್ರಶಸ್ತಿಗಾಗಿ ಅಂತಿಮ ಪಟ್ಟಿಯನ್ನು ಇನ್ನೂ ಸಿದ್ಧಪಡಿಸಿಲ್ಲ. ಅಂತಿಮ ಪಟ್ಟಿಯಲ್ಲಿ ಮನು ಹೆಸರಿರಲಿದೆ ಎಂದು ಕ್ರೀಡಾ ಸಚಿವಾಲಯದ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಈ ವರ್ಷ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಬಾಕರ್ 2 ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ 22ರ ಹರೆಯದ ಹರಿಯಾಣದ ಅಥ್ಲೀಟ್, ಸ್ವಾತಂತ್ರ್ಯಾ ನಂತರ ಒಂದೇ ಒಲಿಂಪಿಕ್ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ದಾಖಲೆ ಬರೆದಿದ್ದರು.
ಇದನ್ನೂ ಓದಿ: ಪ್ರಶಸ್ತಿಗಾಗಿ ಭಿಕ್ಷೆ ಬೇಡಬೇಕಾ?: ಶೂಟರ್ ಮನು ಭಾಕರ್ ತಂದೆ ಆಕ್ರೋಶ!