ಬೆಳಗಾವಿ: "ಕಾರು ಅಪಘಾತ ಪ್ರಕರಣದ ವಿಶೇಷ ತನಿಖೆಗೆ ನಾನು ಆಗ್ರಹಿಸುವುದಿಲ್ಲ. ದೇವರ ದಯೆ, ಕ್ಷೇತ್ರದ ಮತದಾರರು, ಮಠಾಧೀಶರ ಆಶೀರ್ವಾದದಿಂದ ಇವತ್ತು ಆರೋಗ್ಯವಾಗಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದೇನೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ನನ್ನ ಇಲಾಖೆ ಜವಾಬ್ದಾರಿ ಹೊತ್ತುಕೊಂಡು ಇನ್ನೊಮ್ಮೆ ಕಾರ್ಯಪ್ರವೃತ್ತ ಆಗುತ್ತೇನೆ" ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಕಾರು ಅಪಘಾತದಲ್ಲಿ ಗಾಯಗೊಂಡು ಕಳೆದ 13 ದಿನಗಳಿಂದ ಬೆಳಗಾವಿ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೊದಲಿಗೆ ಕರ್ನಾಟಕ ಮಹಾಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ನನಗೆ ಆಗಬಾರದ ದುರ್ಘಟನೆ ಸಂಭವಿಸಿತು. ಜೀವನದ ಕೊನೆ ಹಂತವನ್ನು ನೋಡಿ ಹೋರಾಟ ಮಾಡಿ ಮತ್ತೆ ಬದುಕಿ ಹೊರಗೆ ಬರುತ್ತಿದ್ದೇನೆ. ಇದಕ್ಕೆಲ್ಲಾ ನಮ್ಮ ಹಿರಿಯರು, ತಂದೆ ತಾಯಿಗಳ ಆಶೀರ್ವಾದವೇ ಕಾರಣ. ನನ್ನ ಬದುಕಿನ ಹೋರಾಟದ ಸಂದರ್ಭದಲ್ಲಿ ನಾಡಿನ ಹಲವಾರು ಮಠಾಧೀಶರು, ಪೂಜ್ಯರು ಆಸ್ಪತ್ರೆಗೆ ಬಂದು ಶೀಘ್ರವೇ ಗುಣಮುಖರಾಗುವಂತೆ ಆಶೀರ್ವಾದ ಮಾಡಿದ್ದು, ನನಗೆ ಬಹಳಷ್ಟು ಶಕ್ತಿ ಮತ್ತು ಧೈರ್ಯ ತಂದಿತು" ಎಂದರು.
"ಅದೇ ರೀತಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಆಗಮಿಸಿ ನನ್ನ ಆರೋಗ್ಯ ವಿಚಾರಿಸಿದರು. ಅವರಿಗೆಲ್ಲಾ ನನ್ನ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಪುಣ್ಯವೋ ಏನೋ ಗೊತ್ತಿಲ್ಲ. ವಿಜಯಾ ಆಸ್ಪತ್ರೆಯ ಡಾ. ರವಿ ಪಾಟೀಲ ಮತ್ತು ಅವರ ಎಲ್ಲ ವೈದ್ಯರು, ಸಿಬ್ಬಂದಿ ನನಗೆ ಇಂಥ ಅಪಘಾತ ಆಗಿದೆ ಎಂಬ ಭಾವನೆ ಒಂದು ಕ್ಷಣ ಬರದಂತೆ ಧೈರ್ಯ ತುಂಬಿ ಚಿಕಿತ್ಸೆ ನೀಡಿದರು. ಹಾಗಾಗಿ, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದರು.
"ಬೆಳಗಾವಿ ಗ್ರಾಮೀಣ ಕ್ಷೇತ್ರದ ಗುರುಹಿರಿಯರು, ಮತದಾರ ಬಾಂಧವರು ಪ್ರತಿನಿತ್ಯ ಪೂಜೆ ಸಲ್ಲಿಸಿ ನನ್ನ ಆರೋಗ್ಯ ಸುಧಾರಣೆ ಆಗಲಿ ಎಂದು ಪ್ರಾರ್ಥಿಸಿದರು. ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದ ಜನರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ. ಅದೇ ರೀತಿ ನನ್ನ ಕುಟುಂಬಸ್ಥರು ಬೆನ್ನಿಗೆ ನಿಂತು ಧೈರ್ಯ ತುಂಬಿದರು. ಜೊತೆಗೆ ಮಾಧ್ಯಮಗಳ ಸಹಕಾರ ಕೂಡ ನನಗೆ ಸ್ಫೂರ್ತಿ ತುಂಬಿತು. ಖಂಡಿತವಾಗಲೂ ಆ ಕ್ಷಣ ನೆನಪು ಮಾಡಿಕೊಂಡರೆ ಇದು ನನಗೆ ಪುನರ್ಜನ್ಮವೇ ಸರಿ" ಎಂದರು.
"ವೈದ್ಯರು ಹೇಳಿದಷ್ಟು ದಿನ ವಿಶ್ರಾಂತಿ ತೆಗೆದುಕೊಳ್ಳಲು ಮನಸ್ಸಿದೆ. ಆದರೆ, ಜವಾಬ್ದಾರಿ ಹೆಚ್ಚಿದೆ. ಮಾರ್ಚ್ನಲ್ಲಿ ಬಜೆಟ್ ಮಂಡನೆ ಮಾಡಬೇಕು. ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಳ್ಳೆಯ ರೀತಿ ಕೆಲಸ ಮಾಡುತ್ತಿದೆ. ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲಸ ಮಾಡುತ್ತಿದ್ದಾನೆ. ಇನ್ನೂ ಮೂರು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಎಷ್ಟು ದಿನ ಆಗುತ್ತದೆಯೋ ಅಷ್ಟು ಮಾಡುತ್ತೇನೆ" ಎಂದು ತಿಳಿಸಿದರು.
"ಅಪಘಾತದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವವರಿಗೆ ಹೃದಯಹೀನರು ಅಂತಾ ಹೇಳಬಹುದು. ಸಾವಿನಲ್ಲೂ ರಾಜಕಾರಣ ಮಾಡುವವರಿಗೆ ಉತ್ತರಿಸುವ ಅವಶ್ಯಕತೆ ಇಲ್ಲ" ಎಂದು ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದರು.
ಎಸ್ಕಾರ್ಟ್ ಬಿಟ್ಟು ಬಂದಿದ್ದೆವು: "ಪ್ರಯಾಗ ರಾಜ್ನಲ್ಲಿ ಎಲ್ಲರೂ ಪುಣ್ಯಸ್ನಾನ ಮಾಡುತ್ತಿದ್ದರು. ವಿಶೇಷವಾಗಿ ಸಂಕ್ರಾಂತಿ ಹಿನ್ನೆಲೆಯಲ್ಲಿ ನನ್ನ ತಮ್ಮನ ಮನೆದೇವರು ಹಟ್ಟಿಹೊಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಮಲಪ್ರಭಾ ನದಿ ದಂಡೆಯಲ್ಲಿ ಮನೆಯವರೆಲ್ಲರೂ ಪುಣ್ಯಸ್ನಾನ ಮಾಡಲು ನಿಶ್ಚಯಿಸಿದ್ದೇವು. ಬೆಳಿಗ್ಗೆ 7 ಗಂಟೆಯೊಳಗೆ ಸ್ನಾನ ಮಾಡುವುದಾಗಿ ಅಂದು ರಾತ್ರಿ 10 ಗಂಟೆಗೆ ನಿರ್ಧಿರಿಸಿದ್ದೇವು. ರಾತ್ರಿ 10.30ಕ್ಕೆ ನಾವು ಬೆಂಗಳೂರಿನಿಂದ ಬೆಳಗಾವಿಗೆ ಹೋಗಲು ದಿಢೀರ್ ನಿರ್ಧಾರ ತೆಗೆದುಕೊಂಡಿದ್ದರಿಂದ ಎಸ್ಕಾರ್ಟ್ ಬೇಡ, ನಿಧಾನವಾಗಿ ಹೋಗೋಣ ಎಂದು ತಮ್ಮ ಚನ್ನರಾಜ್ ಹೇಳಿದ್ದರಿಂದ ಎಸ್ಕಾರ್ಟ್ ಬಿಟ್ಟು ಬಂದಿದ್ದೆವು" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ವೈದ್ಯರಿಗೆ ಹೆಬ್ಬಾಳ್ಕರ್ ಪತ್ರ: "ಪ್ರಿಯ ವೈದ್ಯರೇ, ಕಳೆದ 13 ದಿನಗಳು ಇಲ್ಲಿ ನನಗೆ ಆಸ್ಪತ್ರೆಗಿಂತ ಮನೆಯಂತೆ ಭಾಸವಾಯಿತು, ನೀವು ನನ್ನ ಕುಟುಂಬಕ್ಕಿಂತ ಕಡಿಮೆಯಿಲ್ಲದಂತೆ ನನ್ನನ್ನು ನೋಡಿಕೊಂಡಿದ್ದೀರಿ. ನನ್ನ ಕಷ್ಟದ ಸಮಯದಲ್ಲಿ, ನೀವು ನನ್ನ ಪಕ್ಕದಲ್ಲಿ ನಿಂತು, ಪ್ರಬಲವಾದ ಬೆಂಬಲ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ನಿಮ್ಮ ದಯೆ, ತಾಳ್ಮೆ ಮತ್ತು ಸಮರ್ಪಣೆ ಹೃದಯಸ್ಪರ್ಶಿಯಾಗಿತ್ತು".
"ನೀವು ಹಗಲಿರುಳು ನನ್ನೊಂದಿಗೆ ಇದ್ದು ನಾನು ಸದೃಢವಾಗಲು ಕಾರಣರಾಗಿದ್ದೀರಿ ಮತ್ತು ಧೈರ್ಯ ಕಳೆದುಕೊಳ್ಳದಂತೆ ಪ್ರೇರೇಪಿಸಿದ್ದೀರಿ. ನಿಮ್ಮ ಪ್ರೋತ್ಸಾಹ ನನಗೆ ಶೀಘ್ರ ಗುಣಮುಖನಾಗಲು ಶಕ್ತಿ ನೀಡಿತು ಮತ್ತು ನಿಮ್ಮ ಸಹಾನುಭೂತಿಗೆ ನಾನು ಎಂದೆಂದಿಗೂ ಕೃತಜ್ಞನಾಗಿರುತ್ತೇನೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶ ಸಿಗಲಿ, ನಿಮಗೆ ಅತ್ಯಂತ ಉಜ್ವಲ ಭವಿಷ್ಯ ಮತ್ತು ಯಶಸ್ಸನ್ನು ಹಾರೈಸುತ್ತೇನೆ. ನಿಮಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಬರೆದಿರುವ ಪತ್ರವನ್ನು ವೈದ್ಯರಿಗೆ ಸಚಿವೆ ಹೆಬ್ಬಾಳ್ಕರ್ ನೀಡಿದರು.
ಇದನ್ನೂ ಓದಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಟ್ವಿಸ್ಟ್ - ಹಿಟ್ ಅಂಡ್ ರನ್ ಕೇಸ್ ದಾಖಲು: ಎಸ್ಪಿ ಡಾ.ಭೀಮಾಶಂಕರ ಗುಳೇದ
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ