ಹೈದರಾಬಾದ್: ಸೋಮವಾರ ನಡೆದ ವಿಜಯ್ ಹಜಾರೆ ಟ್ರೋಫಿ 2024-25ರ ಎರಡನೇ ಸುತ್ತಿನಲ್ಲಿ ಬರೋಡಾ ತಂಡ ವಿಶೇಷ ದಾಖಲೆ ಬರೆದಿದೆ. ಕೃನಾಲ್ ಪಾಂಡ್ಯ ನಾಯಕತ್ವದ ತಂಡ, ಈ ಋತುವಿನ ಅತೀ ದೊಡ್ಡ ಸ್ಕೋರ್ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಬರೋಡಾ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 403 ರನ್ ಗಳಿಸಿತು. ಇದಕ್ಕುತ್ತರವಾಗಿ ಕೇರಳ 45.5 ಓವರ್‌ಗಳಲ್ಲಿ 341 ರನ್‌ಗಳಿಗೆ ಸೋಲನುಭವಿಸಿತು. ಇದರೊಂದಿಗೆ ಬರೋಡಾ 62 ರನ್‌ಗಳಿಂದ ಪಂದ್ಯ ಜಯಿಸಿತು.
ಮೊದಲು ಬ್ಯಾಟ್ ಮಾಡಲು ಬಂದ ಬರೋಡಾ ಪರ ಶಾಶ್ವತ್ ರಾವತ್ ಮತ್ತು ನಿನಾದ್ ರಥ್ವಾ ಮೊದಲ ವಿಕೆಟ್‌ಗೆ 34 ರನ್ ಪೇರಿಸಿದರು. ರಾವತ್ 22 ಎಸೆತಗಳಲ್ಲಿ 10 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಪಾರ್ಥ್ ಕೊಹ್ಲಿ ಮತ್ತು ರಥ್ವಾ 197 ರನ್‌ಗಳ ಜೊತೆಯಾಟವಾಡಿದರು. ಆದ್ರೆ, 34ನೇ ಓವರ್‌ನಲ್ಲಿ ರಥ್ವಾ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಅವರು 99 ಎಸೆತಗಳನ್ನು ಎದುರಿಸಿ 136 ರನ್ ಗಳಿಸಿದರು. ಕೊಹ್ಲಿ 87 ಎಸೆತಗಳಲ್ಲಿ 72 ರನ್‌ಗಳ ಇನಿಂಗ್ಸ್ ಆಡಿದರು.
45ನೇ ಓವರ್‌ನಲ್ಲಿ ಬರೋಡಾಗೆ ನಾಲ್ಕನೇ ಹೊಡೆತ ಬಿತ್ತು. ವಿಕೆಟ್ ಕೀಪರ್ ವಿಷ್ಣು ಸೋಲಂಕಿ 25 ಎಸೆತಗಳಲ್ಲಿ 46 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಬಂದ ಕೃನಾಲ್ ಪಾಂಡ್ಯ ನಾಯಕತ್ವದ ಇನ್ನಿಂಗ್ಸ್ ಆರಂಭಿಸಿ 80 ರನ್ ಗಳಿಸಿ ಅಜೇಯರಾಗುಳಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 7 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನೂ ಸಹ ಹೊಡೆದರು. ಅವರನ್ನು ಹೊರತುಪಡಿಸಿ ಭಾನು ಪನಿಯಾ 15 ಎಸೆತಗಳಲ್ಲಿ 37 ರನ್ ಗಳಿಸಿ ಅಜೇಯರಾಗುಳಿದರು.
ಮತ್ತೊಂದೆಡೆ, 404 ರನ್‌ಗಳ ಗುರಿ ಬೆನ್ನಟ್ಟಿದ ಕೇರಳ ಅತ್ಯುತ್ತಮ ಆರಂಭ ಪಡೆದಿತ್ತು. ರೋಹನ್ ಕುನ್ನುಮಲ್ ಮತ್ತು ಅಹ್ಮದ್ ಇಮ್ರಾನ್ ನಡುವೆ ಮೊದಲ ವಿಕೆಟ್‌ಗೆ 113 ರನ್‌ಗಳ ಜೊತೆಯಾಟವಿತ್ತು. 16ನೇ ಓವರ್‌ನಲ್ಲಿ ಕೇರಳಕ್ಕೆ ಮೊದಲ ಹೊಡೆತ ಬಿತ್ತು. ಅಹ್ಮದ್ ಅರ್ಧಶತಕ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅವರು 52 ಎಸೆತಗಳನ್ನೆದುರಿಸಿ 51 ರನ್ ಗಳಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ರೋಹನ್ ವಿಕೆಟ್ ಕಳೆದುಕೊಂಡರು. ಅವರು 50 ಎಸೆತಗಳಲ್ಲಿ 65 ರನ್‌ಗಳ ಇನಿಂಗ್ಸ್ ಆಡಿದರು.
ಇದನ್ನೂ ಓದಿ: ಟೀಂ ಇಂಡಿಯಾ ಅಭಿಮಾನಿಗಳಿಗೆ ಬ್ಯಾಡ್ನ್ಯೂಸ್: ಉಳಿದ ಎರಡು ಪಂದ್ಯಗಳಿಗೂ ಸ್ಟಾರ್ ಬೌಲರ್ ಅಲಭ್ಯ!
ಇದಾದ ಬಳಿಕ, ಶಾನ್ ರೋಜರ್ 27 ರನ್, ನಾಯಕ ಸಲ್ಮಾನ್ ನಿಜಾರ್ 19 ರನ್ ಹಾಗೂ ಶರಫುದ್ದೀನ್ 21 ರನ್ ಗಳಿಸಿದರು. ಜಲಜ್ ಸಕ್ಸೇನಾ ಅವರ ಖಾತೆಯನ್ನೂ ತೆರೆಯಲಾಗಿಲ್ಲ. ಸಿಜೋಮನ್ ಜೋಸೆಫ್ 6 ರನ್, ಮೊಹಮ್ಮದ್ ಅಜರುದ್ದೀನ್ 104 ರನ್, ಈಡನ್ ಆಪಲ್ ಟಾಮ್ 17 ರನ್ ಮತ್ತು ಬಾಸಿಲ್ ಥಂಪಿ 10 ಎಸೆತಗಳಲ್ಲಿ 5 ರನ್ ಗಳಿಸಿದರು. ಅಂತಿಮವಾಗಿ ವೈಶಾಖ್ ಚಂದ್ರನ್ 18 ರನ್ ಗಳಿಸಿ ಅಜೇಯರಾಗಿ ಉಳಿದರು.
ಕೃನಾಲ್ ಪಾಂಡ್ಯ ಆಲ್ರೌಂಡ್ ಪ್ರದರ್ಶನ: ಪಂದ್ಯದಲ್ಲಿ ಆರ್ಸಿಬಿ ಆಟಗಾರ ಕೃನಾಲ್ ಪಂಡ್ಯ ಅದ್ಭುತ ಪ್ರದರ್ಶನ ತೋರಿದರು. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲು, ಬ್ಯಾಟಿಂಗ್ನಲ್ಲಿ 54 ಎಸೆತಗಳನ್ನು ಎದುರಿಸಿ 148ರ ಸ್ಟ್ರೈಕ್ ರೇಟ್ನೊಂದಿಗೆ ಅಜೇಯ 80 ರನ್ ಕಲೆಹಾಕಿದರು. ಬೌಲಿಂಗ್ನಲ್ಲೂ 10 ಓವರ್ಗಳ ಬೌಲಿಂಗ್ ಮಾಡಿ 30 ಡಾಟ್ ಬೌಲ್ನೊಂದಿಗೆ 2 ವಿಕೆಟ್ ಪಡೆದು ಅಬ್ಬರಿಸಿದರು.
ಇತ್ತೀಚೆಗೆ, ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಕೃನಾಲ್ ಪಾಂಡ್ಯ ಅವರನ್ನು ಆರ್ಸಿಬಿ ₹5.25 ಕೋಟಿಗೆ ಖರೀದಿಸಿತ್ತು.
ಇದನ್ನೂ ಓದಿ: ಟೀಂ ಇಂಡಿಯಾ ಅಭಿಮಾನಿಗಳಿಗೆ ಬ್ಯಾಡ್ನ್ಯೂಸ್: ಉಳಿದ ಎರಡು ಪಂದ್ಯಗಳಿಗೂ ಸ್ಟಾರ್ ಬೌಲರ್ ಅಲಭ್ಯ!