ಮುಜಾಫರ್‌ಪುರ, ಬಿಹಾರ: ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಈಗ ರೆಕ್ಕೆ ಬಿಚ್ಚಿ ಹಾರಾಟ ನಡೆಸುತ್ತಿದ್ದಾರೆ. ಪಂಜರದಿಂದ ಹೊರ ಬಂದ ಗಿಳಿಗಳಂತೆ ನೀಲಾಕಾಶದಲ್ಲಿ ತೇಲಾಡುತ್ತಿದ್ದಾರೆ. ಅಡುಗೆ ಮನೆಯಿಂದ ಹೊರ ಬರುತ್ತಿರುವ ಗ್ರಾಮೀಣ ಮಹಿಳೆಯರು ಈಗ ತಮ್ಮ ಧೈರ್ಯದಿಂದ ಆಕಾಶದ ಎತ್ತರ ಏರುತ್ತಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಹೊಸ ಹೊಸ ಇತಿಹಾವನ್ನು ಸಷ್ಟಿಸುತ್ತಿದ್ದಾರೆ. ವಾಸ್ತವವಾಗಿ, ಬಿಹಾರದ ಸಣ್ಣ ಭೂಮಿ ಹೊಂದಿರುವ ರೈತರಿಗೆ ಈ 'ಸೋಲಾರ್ ದೀದಿಗಳು' ವರವಾಗುತ್ತಿದ್ದಾರೆ.
ಮುಜಾಫರ್‌ಪುರದ ಸೋಲಾರ್ ದೀದಿಯರು: ಇದು ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಬೋಚಹಾನ್ ಬ್ಲಾಕ್‌ನ ಲೋಹ್ಸಾರಿ ಪಂಚಾಯತ್‌ನ ರತನ್‌ಪುರ ಗ್ರಾಮದ ಇಬ್ಬರು ಮಹಿಳಾ ಉದ್ಯಮಿಗಳಾದ ಬಾಲೇಶ್ವರಿ ದೇವಿ ಮತ್ತು ಉಷಾ ದೇವಿ ಅವರ ಸಾಹಸಗಾಥೆಯ ಕಥೆ. 2023 ರಲ್ಲಿ ಸೌರಶಕ್ತಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ, ಈ ಇಬ್ಬರು ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಮೊದಲು ಮನೆ, ದನಕರುಗಳನ್ನು ಸಾಕುತ್ತಿದ್ದ ಈ ಮಹಿಳೆಯರು ಈಗ ಕೃಷಿ ಮಾಡುವುದಲ್ಲದೇ ಸೋಲಾರ್ ನಿಂದ ಉತ್ತಮ ಲಾಭ ಗಳಿಸುತ್ತಿದ್ದಾರೆ. ಈಗ ಬಾಲೇಶ್ವರಿ ಮತ್ತು ಉಷಾ ಆ ಪ್ರದೇಶದಲ್ಲಿ ಸೋಲಾರ್ ದೀದಿಯರು ಎಂದು ಕರೆಸಿಕೊಳ್ಳುತ್ತಿದ್ದಾರೆ.
ಕಠಿಣ ಪರಿಶ್ರಮದಿಂದ ಯಶಸ್ವಿ ಉದ್ಯಮಿಗಳಾಗಿದ್ದಾರೆ: ಸೌರಶಕ್ತಿ ನೀರಾವರಿ ಅಳವಡಿಸಿಕೊಂಡ ನಂತರ ಈ ಮಹಿಳೆಯರ ಜೀವನ ಸುಧಾರಿಸಿದೆ. ಬದುಕು ಬಂಗಾರವಾಗಿದೆ. ತಮ್ಮ ಜೀವನವನ್ನಷ್ಟೇ ಬೆಳಕಾಗಿಸಿಕೊಳ್ಳುವುದಲ್ಲದೇ ಇತರರ ಬಾಳಲ್ಲೂ ಬೆಳಕಾಗುತ್ತಿದ್ದಾರೆ. ಈ ಇಬ್ಬರು ಮಹಿಳೆಯರು ತಮ್ಮ ಸುತ್ತಲಿನ ಸಣ್ಣ ರೈತರಿಗೆ ಸಹಾಯ ಮಾಡಲು ಶುರು ಮಾಡಿದ್ದಾರೆ. ಸೌರಶಕ್ತಿ ಪಂಪ್‌ಗಳ ಮೂಲಕ ಹತ್ತಿರದ ರೈತರಿಗೆ ಕಡಿಮೆ ದರದಲ್ಲಿ ನೀರು ಒದಗಿಸುತ್ತಿದ್ದಾರೆ. ಮೊದಲು ಡೀಸೆಲ್ ಅಥವಾ ವಿದ್ಯುಚ್ಛಕ್ತಿಯಿಂದ ಚಾಲನೆಯಲ್ಲಿರುವ ಪಂಪ್‌ಗಳ ಬೆಲೆ ಸಾಕಷ್ಟು ಹೆಚ್ಚಿತ್ತು. ಆದರೆ, ಸೌರ ಪಂಪ್‌ಗಳಿಂದಾಗಿ ನೀರಾವರಿ ವೆಚ್ಚವು ಗಮನಾರ್ಹವಾಗಿ ಕಡಿಮೆಯಾಗಿದೆ.
ಅಗ್ಗದ ದರದಲ್ಲಿ ನೀರು ಪೂರೈಕೆ: ಬಿಹಾರದಲ್ಲಿ ರೈತರಿಗೆ ಕಡಿಮೆ ಭೂಮಿ ಹೊಂದಿದ್ದಾರೆ. ಸಣ್ಣ ಭೂಮಿ ಹೊಂದಿರುವವರು ನೀರಾವರಿಯಲ್ಲಿ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ರೈತರು ಅಕ್ಕಪಕ್ಕದ ರೈತರಿಂದ ನೀರು ಖರೀದಿಸುವ ಅನಿವಾರ್ಯತೆ ಕೂಡಾ ಇದೆ ಅಂತಾರೆ ಸೋಲಾರ್ ದೀದಿ ಉಷಾ ದೇವಿ
ವಿದ್ಯುತ್ ಪಂಪ್ ಮೂಲಕ ನೀರು ಪೂರೈಸಲು ಗಂಟೆಗೆ ಸುಮಾರು 125 ರಿಂದ 150 ರೂ. ದರ ಇದೆ, ಡೀಸೆಲ್ ಪಂಪ್ ಮೂಲಕ ನೀರು ಪೂರೈಸಲು ಗಂಟೆಗೆ 150 ರಿಂದ 200 ರೂ ವೆಚ್ಚವಾಗುತ್ತದೆ. ಒಂದು ಗಂಟೆಯಲ್ಲಿ 3 ರಿಂದ 4 ಕಟ್ಟೆಗಳಿಗೆ ನೀರುಣಿಸಬಹುದು. ಆದರೆ ಸೋಲಾರ್ ಪಂಪ್ನಿಂದ ಕಡಿಮೆ ವೆಚ್ಚ ವಾಗುತ್ತದೆ - ಉಷಾದೇವಿ, ಸೋಲಾರ್ ದೀದಿ, ಮುಜಾಫರ್‌ಪುರ
ಸೌರಶಕ್ತಿ ನೀರಾವರಿಯಿಂದ ಹೆಚ್ಚಿದ ಲಾಭ : ಸೋಲಾರ್ ಪಂಪ್‌ಗಳಿಂದಾಗಿ ರೈತರು ಇನ್ನು ಮುಂದೆ ವಿದ್ಯುತ್ ಕಡಿತ ಅಥವಾ ಡೀಸೆಲ್ ಬೆಲೆ ಏರಿಕೆ ಬಗ್ಗೆ ಚಿಂತಿಸಬೇಕಾಗಿಲ್ಲ ಎನ್ನುತ್ತಾರೆ ಉಷಾದೇವಿ ಮತ್ತು ಅವರ ಪತಿ ಮುಖೇಶ್ ಸಾಹ್. ಸೋಲಾರ್ ಪಂಪ್‌ಗಳು 5 ಹೆಚ್ ಪಿ ಸಾಮರ್ಥ್ಯ ಹೊಂದಿವೆ. ಇದರಿಂದ ರೈತರು ಈಗ ಭತ್ತ, ಜೋಳ ಮತ್ತಿತರ ಆಹಾರ ಬೆಳೆಗಳ ಜತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ.
ಮಹಿಳಾ ಉದ್ಯಮಶೀಲತೆಯ ಅಲೆ: ಸೌರಶಕ್ತಿ ನೀರಾವರಿ ಕಥೆ ಈ ಇಬ್ಬರು ಮಹಿಳೆಯರಾದ ಬಾಲೇಶ್ವರಿ ಮತ್ತು ಉಷಾದೇವಿ ಅವರಿಗೆ ಮಾತ್ರ ಸೀಮಿತವಾಗಿಲ್ಲ. ವಾಸ್ತವವಾಗಿ 90 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಬಿಹಾರದಲ್ಲಿದ್ದಾರೆ. ಇವರೆಲ್ಲರ ಜೀವನವು ಸೌರಶಕ್ತಿ ನೀರಾವರಿ ಅಳವಡಿಸಿಕೊಳ್ಳುವ ಮೂಲಕ ಬದಲಾಗಿದೆ. ಈ ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದ್ದಲ್ಲದೆ, 3,000 ಕ್ಕೂ ಹೆಚ್ಚು ಇತರ ರೈತರಿಗೆ ಸಹಾಯ ಮಾಡುತ್ತಿದ್ದಾರೆ. ಕೆಲವು ಎನ್‌ಜಿಒಗಳು, ಗೇಟ್ಸ್ ಫೌಂಡೇಶನ್, ಜೀವಿಕಾ ಮತ್ತು ಎಕೆಆರ್‌ಎಸ್‌ಪಿ (ಅಗಾ ಖಾನ್ ರೂರಲ್ ಅಸಿಸ್ಟೆನ್ಸ್ ಪ್ರೋಗ್ರಾಂ) ಸಹ ಈ ಸೌರ ದೀದಿಗಳ ಯಶಸ್ಸಿನಲ್ಲಿ ತಮ್ಮ ಪಾಲು ಹೊಂದಿದ್ದಾರೆ.
ಕೆಲವು ವರ್ಷಗಳ ಹಿಂದೆ, ರೈತರು ವಿದ್ಯುತ್ ಲಭ್ಯವಿಲ್ಲದ ಕಾರಣ ಡೀಸೆಲ್ ಪಂಪಸೆಟ್ ಗಳಿಂದ ನೀರನ್ನು ಮೇಲೆತ್ತಿ ನೀರಾವರಿ ಮಾಡುತ್ತಿದ್ದರು. ಕರೆಂಟು ಬಂದಾಗ ಎಲೆಕ್ಟ್ರಿಕ್ ಪಂಪ್‌ಗಳಿಂದ ನೀರು ಹಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಆದರೆ, ಸೋಲಾರ್ ಪಂಪ್ ಬಂದಾಗಿನಿಂದ ಕಡಿಮೆ ದರದಲ್ಲಿ ನೀರು ಸಿಗಲಾರಂಭಿಸಿದೆ. ಸೋಲಾರ್ ಪಂಪ್‌ಗಳಲ್ಲಿ ವಿದ್ಯುತ್ ಕಡಿತದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಅಂತಾರೆ ಎಕೆಆರ್‌ಎಸ್‌ಪಿ ಟೀಂ ಲೀಡರ್ ಮುಖೇಶ್ ಕುಮಾರ್
ಸೌರಶಕ್ತಿ ಸ್ವಾವಲಂಬನೆಯತ್ತ ಹೆಜ್ಜೆಗಳು: ಬೋಚಹಾನ್ ಬ್ಲಾಕ್‌ನಲ್ಲಿ ಸೋಲಾರ್ ಪಂಪ್‌ಗಳನ್ನು ಬಳಸುವ ಮಹಿಳೆಯರು ಈಗ ತಮ್ಮ ಕುಟುಂಬಗಳಿಗೆ ಲಾಭ ಗಳಿಸುವುದು ಮಾತ್ರವಲ್ಲದೇ ಇಡೀ ಬ್ಲಾಕ್‌ನಲ್ಲಿ ಸ್ವಾವಲಂಬನೆಗೆ ಉದಾಹರಣೆಯಾಗಿದ್ದಾರೆ. ಬಾಗೇಶ್ವರಿ ಮತ್ತು ಉಷಾದೇವಿ ಅವರ ನೇತೃತ್ವದಲ್ಲಿ ಅನೇಕ ಮಹಿಳೆಯರು ಈ ಅಭಿಯಾನಕ್ಕೆ ಕೈಜೋಡಿಸಿ ಸ್ವಾವಲಂಬಿಗಳಾಗಿದ್ದಾರೆ.
'ಸೋಲಾರ್ ದೀದಿಗಳು' ರೈತರಿಗೆ ವರದಾನ: ಹಲವು ಬದಲಾವಣೆಯೊಂದಿಗೆ ಬಿಹಾರದ ಮಹಿಳೆಯರು ತಮ್ಮ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಮಾತ್ರವಲ್ಲದೇ, ತಮ್ಮ ಶ್ರಮ ಮತ್ತು ಉದ್ಯಮಶೀಲತೆಯ ಮೂಲಕ ಇಡೀ ಸಮುದಾಯಕ್ಕೆ ಪ್ರಗತಿಯ ಹಾದಿಯನ್ನು ತೋರಿಸುತ್ತಿದ್ದಾರೆ. ಈ ಬದಲಾವಣೆಯ ಪರಿಣಾಮ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬಲವಾಗುವ ಸಾಧ್ಯತೆಗಳಿವೆ.