ಚೆನ್ನೈ(ತಮಿಳುನಾಡು): ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 37 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯನ್ನು ಇಲ್ಲಿನ ರಸ್ತೆಬದಿಯ ಬಿರಿಯಾನಿ ಮಾರಾಟಗಾರ ಜ್ಞಾನಶೇಖರನ್ ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಮತ್ತು ಆಕೆಯ ಪುರುಷ ಸ್ನೇಹಿತ ಹತ್ತಿರದ ಚರ್ಚ್ನಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿ ಕ್ಯಾಂಪಸ್ಗೆ ಹಿಂದಿರುಗುತ್ತಿದ್ದಾಗ ಮುಂಜಾನೆ ಈ ಘಟನೆ ನಡೆದಿದೆ. ನಿರ್ಜನ ರಸ್ತೆಯಲ್ಲಿ ಇಬ್ಬರನ್ನೂ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ನಂತರ ದಾಳಿಕೋರರು ಪುರುಷ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿಯನ್ನು ಹತ್ತಿರದ ಪೊದೆಗೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಕೊಟ್ಟೂರುಪುರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಇಬ್ಬರೂ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮತ್ತೋರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನಿಂದ ಘಟನೆಯ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚೆನ್ನೈನ ಹೃದಯಭಾಗದಲ್ಲಿ ನಡೆದ ಈ ಘಟನೆಯು ರಾಜ್ಯದಾದ್ಯಂತ ಆಘಾತ ಮೂಡಿಸಿದೆ. ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಪಕ್ಷ ಬಿಜೆಪಿ ಮಾತ್ರವಲ್ಲದೆ ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷಗಳೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ ತಮಿಳುನಾಡು ಘಟಕದ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, "ಡಿಎಂಕೆ ಸರ್ಕಾರದ ಅಡಿಯಲ್ಲಿ ತಮಿಳುನಾಡು ಕಾನೂನುಬಾಹಿರ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಮತ್ತು ಅಪರಾಧಿಗಳಿಗೆ ಸ್ವರ್ಗವಾಗಿದೆ. ಪ್ರತಿಪಕ್ಷಗಳನ್ನು ಹಣಿಯಲು ಸರ್ಕಾರವು ಪೊಲೀಸರನ್ನು ಬಳಸುತ್ತಿದ್ದು, ಮಹಿಳೆಯರು ರಾಜ್ಯದಲ್ಲಿ ಸುರಕ್ಷಿತವಾಗಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್ಗೆ 'ಭಾರತ ರತ್ನ' ಪ್ರಶಸ್ತಿ ನೀಡಿ: ಸಚಿವ ಗಿರಿರಾಜ್ ಸಿಂಗ್ ಆಗ್ರಹ - GIRIRAJ SINGH